Publish Date: Thu, 27 Aug 2026 (09:43 IST)
Updated Date: Thu, 27 Aug 2026 (09:45 IST)
'ಕೆ.ಜಿ.ಎಫ್: ಚಾಪ್ಟರ್ 2' ನಂತರ ಕನ್ನಡಿಗರ ಹೆಮ್ಮೆಯ ನಟ, 'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಗ್ಯಾಂಗ್‌ಸ್ಟರ್ ಡ್ರಾಮಾ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬ್ರಹ್ಮಾಂಡ ಗಳಿಕೆ ಮಾಡಿದೆ.
ವಿಶ್ವಾದ್ಯಂತ ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರವು ಒಟ್ಟು ₹140 ಕೋಟಿ ಗ್ರಾಸ್ ಗಳಿಕೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ (ಭಾರತದಲ್ಲಿ) ಚಿತ್ರವು ಒಟ್ಟು ₹101 ಕೋಟಿ ನಿವ್ವಳ ಕಲೆಕ್ಷನ್ ಸಾಧಿಸಿದ್ದು, ಒಟ್ಟು ಭಾರತೀಯ ಗ್ರಾಸ್ ಗಳಿಕೆ ₹120 ಕೋಟಿ ದಾಟಿದೆ. ಉಳಿದಂತೆ ವಿದೇಶಿ ಮಾರುಕಟ್ಟೆಯಿಂದ ಮೊದಲ ದಿನವೇ ಸುಮಾರು ₹20 ಕೋಟಿ (2 ಮಿಲಿಯನ್ ಡಾಲರ್‌ಗೂ ಹೆಚ್ಚು) ಗ್ರಾಸ್ ಕಲೆಕ್ಷನ್ ಹರಿದುಬಂದಿದೆ.
ದೇಶಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ 'ಟಾಕ್ಸಿಕ್' ಪ್ರತಿಯೊಂದು ಪ್ರಾಂತ್ಯದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಪೈಕಿ ಉತ್ತರ ಭಾರತದ ಹಿಂದಿ ಮಾರುಕಟ್ಟೆಯಲ್ಲಿ ಯಶ್ ಅವರ ಕ್ರೇಜ್ ತುದಿಯಲ್ಲಿದ್ದು, ಹಿಂದಿ ಆವೃತ್ತಿಯೊಂದೇ ಮೊದಲ ದಿನ ಅತ್ಯಧಿಕ ಅಂದರೆ ₹55 ಕೋಟಿ ನಿವ್ವಳ ಗಳಿಕೆ ತಂದುಕೊಟ್ಟಿದೆ.
ಚಿತ್ರದ ಮೂಲ ಭಾಷೆಯಾದ ಕನ್ನಡದಲ್ಲಿ ಶೇಕಡಾ 89%ಕ್ಕೂ ಹೆಚ್ಚು ಥಿಯೇಟರ್ ಆಕ್ಯುಪೆನ್ಸಿಯೊಂದಿಗೆ ಮೊದಲ ದಿನ ₹23.30 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗು ಬೆಲ್ಟ್‌ನಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಅಲ್ಲಿಂದ ₹11 ಕೋಟಿ ನಿವ್ವಳ ಗಳಿಕೆಯಾಗಿದೆ. ಇದರ ಜೊತೆಗೆ ತಮಿಳು ಆವೃತ್ತಿಯಿಂದ ₹5.50 ಕೋಟಿ ಹಾಗೂ ಮಲೆಯಾಳಂ ಆವೃತ್ತಿಯಿಂದ ₹1.30 ಕೋಟಿ ಕಲೆಕ್ಷನ್ ದಾಖಲಾಗಿದೆ.
ಯಶ್ ಅವರ ಡ್ಯುಯಲ್ ಶೇಡ್ ನಟನೆ, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಕುರೇಷಿ ಮತ್ತು ರುಕ್ಮಿಣಿ ವಸಂತ್ ಅವರ ನಟನೆಗೆ ಪ್ರೇಕ್ಷಕರಿಂದ ತೀವ್ರ ಚರ್ಚೆ ವ್ಯಕ್ತವಾಗುತ್ತಿದ್ದು, ಈ ಬಿಗ್ ಬಜೆಟ್ ಚಿತ್ರವು ಮುಂಬರುವ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ದೊಡ್ಡ ಮಟ್ಟದ ದಾಖಲೆಗಳನ್ನು ನಿರ್ಮಿಸುವ ಮುನ್ಸೂಚನೆ ನೀಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ