Publish Date: Wed, 29 May 2024 (17:59 IST)
Updated Date: Wed, 29 May 2024 (18:22 IST)
ಬೆಂಗಳೂರು: ಇದೇ ವರ್ಷ ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಖಾಹಾರಿ ಚಿತ್ರವನ್ನು ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿಲ್ಲವಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ ಚಿತ್ರಮಂದಿರದಲ್ಲಿ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ.
ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ ಎನ್ನುತ್ತಿದ್ದಾರೆ. ಅಮೇಜಾನ್ ಪ್ರೈಮ್ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಸಂದೀಪ್ ಸುಂಕದ್ ನಿರ್ದೇಶನದ ಶಾಖಾಹಾರಿ ಸಿನಿಮಾದ ಸೂತ್ರಧಾರಿ. ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯದ್ಬುತವಾಗಿ ನಟಿಸಿದ್ದರು. ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಕಾನ್ಸ್ಟೇಬಲ್ ಮಮತಕ್ಕನ ಪಾತ್ರಧಾರಿಯಾಗಿ ಪ್ರತಿಭಾ ನಾಯಕ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಅಲ್ಲಿ ನಡೆಯುವ ಕೆಲ ಘಟನೆಗಳನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ.