ಸಾಯಿಪ್ರಕಾಶ್ ಸಾರಥ್ಯದ ಜಗ್ಗಿ ಜಗನ್ನಾಥನ ಟ್ರೇಲರ್ ಬಂತು!

ಶನಿವಾರ, 17 ಆಗಸ್ಟ್ 2019 (15:12 IST)
ಸೆಂಟಿಮೆಂಟ್ ಹಾಗೀ ಭಕ್ತಿಪ್ರಧಾನ ಚಿತ್ರಗಳ ನಿರ್ದೇಶಕರೆಂಬ ಖ್ಯಾತಿಗೆ ಪಾತ್ರರಾಗಿದ್ದ ಓಂ ಸಾಯಿಪ್ರಕಾಶ್ ಈಗ ಹಠಾತ್ತನೆ ಪಥ ಬದಲಿಸಿದ್ದಾರೆ. ಅವರೀಗ ಮಾಸ್ ಸಬ್ಜೆಕ್ಟೊಂದನ್ನು ಕೈಗೆತ್ತಿಕೊಂಡು ಜಗ್ಗಿ ಜಗನ್ನಾಥ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪಟ್ಟಾಗಿ ಚಿತ್ರೀಕರಣವನ್ನೂ ಮುಗಿಸಿಕೊಂಡಿರೋ ಈ ಸಿನಿಮಾದ ಜಬರ್ಧಸ್ತ್ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ.
ಓಂ ಸಾಯಿಪ್ರಕಾಶ್ ಅವರ ಚಿತ್ರಗಳನ್ನು ನೋಡಿಕೊಂಡು ಬಂದವರು ಜಗ್ಗಿ ಜಗನ್ನಾಥನ ಟ್ರೇಲರ್ ನೋಡಿದರೆ ಅರೆಕ್ಷಣ ಅವಾಕ್ಕಾಗುತ್ತಾರೆ. ಯಾಕೆಂದರೆ, ಇದರಲ್ಲಿ ಕಾಣಿಸಿಕೊಂಡಿರೋ ಕಥೆ, ಸನ್ನಿವೇಶಗಳೆಲ್ಲವೂ ಸಾಯಿಪ್ರಕಾಶ್ರ ಇಮೇಜಿಗೆ ವಿರುದ್ಧ ದಿಕ್ಕಿನಲ್ಲಿವೆ. ಮತ್ತದು ಭರವಸೆ ಮೂಡಿಸುವಂತೆಯೂ ಇದೆಯೆಂಬುದು ವಿಶೇಷ. ಜಗ್ಗಿ ಜಗನ್ನಾಥ್ ಚಿತ್ರದಲ್ಲಿ ಹೊಸ ಪ್ರತಿಭೆ ಲಿಖಿತ್ ನಾಯಕನಾಗಿ ನಟಿಸಿದ್ದಾರೆ. ದುನಿಯಾ ರಶ್ಮಿ ನಾಯಕಿಯಾಗಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಗ್ನಿ ಐಪಿಎಸ್ ಚಿತ್ರವನ್ನು ನೆನಪಿಸುವಂಥಾ ಸೂಪರ್ ಕಾಪ್ ಆಗಿ ಅಬ್ಬರಿಸಿದ್ದಾರೆ.
 
ಡೈಲಾಗ್ ಕಿಂಗ್ ಸಾಯಿಕುಮಾರ್ ತಮ್ಮ ಬಿರುದಿಗೆ ತಕ್ಕುದಾದ ಪಾತ್ರದಲ್ಲಿ ನಟಿಸಿರೋದನ್ನು ಈ ಟ್ರೇಲರ್ ಸಾಕ್ಷೀಕರಿಸುತ್ತದೆ. ಅವರ ಪಾತ್ರಕ್ಕೇ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರುವುದೂ ಸ್ಪಷ್ಟವಾಗುತ್ತೆ. ರೌಡಿಸಂ, ಮಾಫಿಯಾ ಜಗತ್ತು ಮತ್ತು ಖಡಕ್ ಪೊಲೀಸರ ಹಗ್ಗಜಗ್ಗಾಟದ ರೋಚಕ ಕಥೆ ಜಗ್ಗಿ ಜಗನ್ನಾಥನದ್ದಂತೆ. ಆದರೆ, ಕಥೆಯಲ್ಲಿ ಇದನ್ನು ಮೀರಿದ ರೋಚಕ ಅಂಶಗಳಿವೆ. ಸೀದಾಸಾದಾ ಹುಡುಗನೊಬ್ಬ ಅಘೋರಿಯಾಗಿ ಬದಲಾಗೋ ಕಥನವೂ ಈ ಚಿತ್ರದಲ್ಲಿದೆ. ಒಟ್ಟಾರೆಯಾಗಿ ಓಂ ಸಾಯಿಪ್ರಕಾಶ್ ಆಕ್ಷನ್ ಮೂಡಿನಲ್ಲಿಯೂ ಪ್ರೇಕ್ಷಕರನ್ನು ಮೋಡಿಗೀಡು ಮಾಡೋ ಲಕ್ಷಣಗಳೇ ಈ ಟ್ರೇಲರ್ ತುಂಬಾ ಕಾಣಿಸುತ್ತಿವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರ್ನಾಟಕ ನೆರೆ ಪರಿಹಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ?