Select Your Language

Notifications

webdunia
webdunia
webdunia
webdunia

ಎಸ್ ಆರ್ ಪುಟ್ಟಣ್ಣ ಕಣಗಾಲ್ - ಒಂದು ಮೆಲುಕು

ಎಸ್ ಆರ್ ಪುಟ್ಟಣ್ಣ ಕಣಗಾಲ್ - ಒಂದು ಮೆಲುಕು
Bangalore , ಗುರುವಾರ, 1 ಡಿಸೆಂಬರ್ 2016 (09:37 IST)
ಕನ್ನಡ ಚಲನಚಿತ್ರರಂಗ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲು ಕಾರಣರಾದ ಪ್ರಮುಖರಲ್ಲಿ ಹತ್ತಾರು ನಿರ್ದೇಶಕರ ಅಸಮಾನ್ಯ ಕೊಡುಗೆ ಕಾರಣವೆಂಬುದು ಪ್ರಶ್ನಾತೀತ. ಚಲನಚಿತ್ರಗಳಲ್ಲಿ ತಾರಾಮೌಲ್ಯವಿದ್ದಂತೆ, ನಿರ್ದೇಶಕರೂ ತಾರಾಪಟ್ಟ ಹೊಂದುತ್ತಾ ಬಂದಿರುವುದನ್ನ್ನು ನಾವು ಕಾಣುತ್ತಾ ಬಂದಿದ್ದೇವೆ. 
 
ವಿಶ್ವದ ಇತರೆಡೆಯೂ ನಟರನ್ನು ಕೇಂದ್ರೀಕಸುವ ಜೊತೆ ಜೊತೆಯಲ್ಲಿಯೇ ನಿರ್ದೇಶಕರ ಆಯ್ಕೆ ಮೇಲೆಯೂ ಪ್ರೇಕ್ಷಕರ ಸೃಷ್ಟಿಯಾಗುವುದನ್ನು ನೋಡಿದ್ದೇವೆ. ಆಯಾ ಕಾಲಮಾನಕ್ಕೆ ತಕ್ಕಂತೆ ನಿರ್ದೇಶಕರ ಜಾಣ್ಮೆ, ಕಥನ ಶೈಲಿ, ತಾಂತ್ರಿಕ ಅಳವಡಿಕೆಯ ಮೇಲೆ ಚಲನಚಿತ್ರಗಳು ಯಶಸ್ವಿಯಾಗುತ್ತಾ ಬಂದಿವೆ.
 
ಕನ್ನಡದ ಮೊದಲ ಚಿತ್ರ ಸತಿ ಸುಲೋಚನ ನಿರ್ದೇಶಕ ವಿ.ವಿ.ರಾವ್ ಅವರಿಂದ ಆರಂಭಗೊಂಡ, ಈಚೆಗೆ ಬಿಡುಗಡೆಯಾದ ಕನ್ನಡ ಚಿತ್ರದ ನಿರ್ದೇಶಕರವರೆಗೂ ಹಲವಾರು ಉತ್ಕೃಷ್ಟ ಚಿತ್ರಗಳಲ್ಲಿ ಒಂದಲ್ಲ ಒಂದು ವೈವಿಧ್ಯತೆಯನು ಕಾಣಬಹುದಾಗಿದೆ. 
 
ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ತಂದಿದ್ದೇ ಅಲ್ಲದೆ, ಡಾ. ರಾಜಕುಮಾರ್ ಅವರಂತಹ ಮೇರು ನಟರನ್ನು ತೆರೆಗೆ ಪರಿಚಯಿಸಿದ ಹೆಚ್.ಎಲ್.ಎನ್. ಸಿಂಹ, ಕನ್ನಡ ಚಿತ್ರಗಳಿಗೆ ಹೊಸತನದ ಮೆರುಗು ನೀಡಿದ ಬಿ.ಆರ್. ಪಂತುಲು ಕನ್ನಡ ಪ್ರೇಕ್ಷಕರ ಸಂಖ್ಯೆಯನ್ನು ಗಮನಾರ್ಹವಾಗಿ ಏರಿಸಿದ ಬಿ.ಎಸ್. ರಂಗಾ, ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಜಿ.ವಿ.ಅಯ್ಯರ್, ವೈ.ಆರ್. ಸ್ವಾಮಿ, ದೊರೆ-ಭಗವಾನ್, ಎನ್. ಲಕ್ಷ್ಮಿನಾರಾಯಣ, ಕೆ.ಎಸ್.ಎಲ್.ಸ್ವಾಮಿ, ಶಂಕರನಾಗ್.
 
ಅತ್ಯಾಮೋಘ ಚಿತ್ರಗಳನ್ನು ನೀಡಿದ ಸಿದ್ದಲಿಂಗಯ್ಯ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ಬರಗೂರು ರಾಮಚಂದ್ರಪ್ಪ, ರವಿಚಂದ್ರನ್, ಕಾಶಿನಾಥ್, ಉಪೇಂದ್ರ ಇವರಷ್ಟೇ ಅಲ್ಲದೆ ಕನ್ನಡ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆದಿಟ್ಟ ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಪಿ ಶೇಷಾದ್ರಿ ಮೊದಲಾದ ಅನೇಕ ನಿರ್ದೇಶಕರು ತಮ್ಮ ಹೊಸತನದ ಆಲೋಚನೆಗಳಿಂದ ಚಲನಚಿತ್ರಗಳ ಯಶಸ್ಸಿಗೆ ಕಾರಣರಾದರು.
 
ಚಲನಚಿತ್ರಗಳ ಯಶಸ್ಸು ತಂದುಕೊಡುವುದರೊಂದಿಗೆ, ಪ್ರೇಕ್ಷಕರಿಗೆ ಮನರಂಜನೆಗೂ ಮೀರಿದ ಆನಂದವನ್ನು ಕಟ್ಟಿಕೊಡುವ ಚಲನಚಿತ್ರ ನಿರ್ದೇಶಕರ ಅಗಾಧ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಾರ್ಯಕ್ರಮ ಹಮ್ಮಿಕೊಂಡಿದೆ. 
 
ಜನಸಾಮಾನ್ಯರ ನಡುವಿನ ಕಥೆಗಳನ್ನು ಆಯ್ದುಕೊಂಡು ಜನಮಾನಸಲ್ಲಿ ಅಚ್ಚಳಿಯದ ನೆನಪುಗಳನ್ನು ಬಿತ್ತಿದ ಎಸ್.ಆರ್. ಪುಟ್ಟಣ್ಣ ಕಣಗಾಲರು ಕನ್ನಡ ಚಲನಚಿತ್ರರಂಗದ ಪ್ರಾತಃಸ್ಮರಣೀಯರಲ್ಲಿ ಪ್ರಮುಖರು. ಇಂತಹ ಧೀಮಂತ ನಿರ್ದೇಶಕ ಪುಟ್ಟಣ್ಣನವರ ಜನ್ಮ ದಿನವಾದ ಡಿಸೆಂಬರ್ 1ರಂದು ಅವರೇ ನಿರ್ದೇಶಿಸಿದ ಮೂರು ಸಣ್ಣ ಕಥೆಗಳ ಸಂಗಮವಾದ ವಿಭಿನ್ನ ಚಿತ್ರ ಕಥಾ ಸಂಗಮ ಪ್ರದರ್ಶನವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಜ್ಜುಗೊಳಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂಭಾಗ ಬಾದಾಮಿ ಹೌಸ್‍ನಲ್ಲಿ ಇಂದು (ಡಿಸೆಂಬರ್ 1) ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚಂದನವನದಲ್ಲಿ ಹೊಸ-ಹಳೆ ಸಿನಿಮಾಗಳ ಸಮಾಗಮ