ಹೈದರಾಬಾದ್: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ, ಹಲವೆಡೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶನಿವಾರ ಓಪನ್ ಆಗಿದೆ.
ಅಲ್ಲು ಮತ್ತು ರಶ್ಮಿಕಾ ಮಂದಾನ ಅಭಿನಯದ ಈ ಸಿನಿಮಾ ಇದೇ 5ರಂದು ತೆರೆಗೆ ಬರಲಿದೆ. ಹೀಗಾಗಿ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಅಮೆರಿಕ ಇನ್ನಿತರೆ ಕಡೆಗಳಲ್ಲಿ ಶನಿವಾರವೇ ಮುಂಗಡ ಬುಕಿಂಗ್ ಆರಂಭವಾಗಿದೆ.
ಕೇವಲ ಒಂದೇ ದಿನದಲ್ಲಿ ದಾಖಲೆ ಮೊತ್ತದ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆ. ಟಿಕೆಟ್ ಬುಕಿಂಗ್ ವೇಗ ನೋಡಿದರೆ ಪುಷ್ಪ 2 ಸಿನಿಮಾವು, ಬಾಹುಬಲಿ 2 ದಾಖಲೆ ಮುರಿಯಲಿದೆಯಾ ಎಂಬ ಅನುಮಾನ ಮೂಡುತ್ತಿದೆ.
ಆಂಧ್ರ, ತೆಲಂಗಾಣ, ಕೇರಳ ಇನ್ನೂ ಕೆಲವು ರಾಜ್ಯಗಳಲ್ಲಿ ನಿನ್ನೆ ಬುಕಿಂಗ್ ಓಪನ್ ಆಗಿರಲಿಲ್ಲ. ಹಾಗಿದ್ದರೂ ಸಹ ಭಾರತ ಒಂದರಲ್ಲೇ ನಿನ್ನೆ ಒಂದೇ ದಿನದಲ್ಲಿ ಕೇವಲ ಮಲ್ಟಿಪ್ಲೆಕ್ಸ್ಗಳಲ್ಲಿ 55 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮುಂಗಡವಾಗಿ ಬುಕ್ಕಿಂಗ್ ಆಗಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಸೇರಿಸಿಕೊಂಡರೆ ಮೊದಲ ದಿನವೇ 2.79 ಲಕ್ಷ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆಯಂತೆ ಎಂದು ಮೂಲಗಳು ತಿಳಿಸಿವೆ.
ಇಂದು ಕೇರಳದಲ್ಲಿ ಬುಕಿಂಗ್ ಓಪನ್ ಆಗಿದ್ದು, ಓಪನ್ ಆದ ಕೂಡಲೇ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗುತ್ತಿವೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಟಿಕೆಟ್ ಬುಕಿಂಗ್ ಇನ್ನೂ ಓಪನ್ ಆಗಿಲ್ಲ. ಒಂದೊಮ್ಮೆ ಆ ಎರಡು ರಾಜ್ಯಗಳಲ್ಲಿ ಟಿಕೆಟ್ ಬುಕಿಂಗ್ ಓಪನ್ ಆದರೆ ಈ ಸಂಖ್ಯೆ ದುಪ್ಪಟ್ಟಾಗಲಿದೆ.
ಕೆಲ ವರದಿಗಳ ಪ್ರಕಾರ ಈ ವರೆಗೆ ಆಗಿರುವ ಕೇವಲ ಒಂದು ದಿನದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ನಿಂದಲೇ ಸುಮಾರು 15 ಕೋಟಿಗೂ ಹೆಚ್ಚು ಹಣ ಗಳಿಕೆ ಆಗಲಿದೆಯಂತೆ. ಮುಂದಿನ ನಾಲ್ಕು ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಟಿಕೆಟ್ನಿಂದಲೇ ನೂರು ಕೋಟಿ ಗಳಿಕೆ ನಿರೀಕ್ಷಿಸಲಾಗಿದೆ.