Publish Date: Sat, 16 Nov 2024 (19:31 IST)
Updated Date: Sat, 16 Nov 2024 (19:33 IST)
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅವರ ಮದುವೆ ವಿಚಾರ ಕಳೆದ ಕೆಲ ವರ್ಷಗಳಿಂದ ಸುದ್ದಿಯಾಗುತ್ತಲೇ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ನಟಿ ಕೀರ್ತಿ ಮದುವೆ ನಡೆಯಲಿದೆ ಎನ್ನಲಾಗಿದೆ.
ಈ ಹಿಂದೆ ರಾಜಕಾರಣೀಯ ಜತೆ ನಟಿ ಕೀರ್ತಿ ಸುರೇಶ್ ಮದುವೆ ವಿಚಾರ ತಳುಕು ಹಾಕಿತ್ತು. ಅದಲ್ಲದೆ ಸಂಗೀತಗಾರ ಅನಿರುದ್ಧ ರವಿಚಂದರ್ ಜತೆಯೂ ಇವರ ಮದುವೆ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಕೀರ್ತಿ ಪ್ರತಿಕ್ರಿಯಿಸಿ, ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟನೆ ನೀಡಿದ್ದರು. ಅದಲ್ಲದೆ ಅವರ ತಂದೆ ಜಿ ಸುರೇಶ್ ಕುಮಾರ್ ಕೂಡಾ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು.
ಇದೀಗ ಮತ್ತೇ ಕೀರ್ತಿ ಸುರೇಶ್ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಈ ವರ್ಷದ ಆರಂಭದಲ್ಲಿ, ವ್ಯಕ್ತಿಯೊಬ್ಬರ ಜತೆಗಿನ ಕೀರ್ತಿ ಸುರೇಶ್ ಪೋಟೋ ಹಲವು ಊಹಾಪೋಹಗಳನ್ನು ಹುಟ್ಟುಹಾಕಿತು. ಇದೀಗ ಡಿಸೆಂಬರ್ ತಿಂಗಳಿನಲ್ಲಿ ಕೀರ್ತಿ ಸುರೇಶ್ ಹಸೆಮಣೆ ಏರಲು ಸಜ್ಜಾಗಿದ್ದಾರೆಂಬ ಸುದ್ದಿಯಿದೆ. ಹುಡುಗ ಯಾರು ಎಂಬುದರ ಬಗ್ಗೆ ಇದುವರೆಗೂ ಸ್ಪಷ್ಟ ಮಾಹಿತಿಯಿಲ್ಲ. ಇನ್ನೂ ಮದುವೆ ವಿಚಾರ ಬಗ್ಗೆಯೂ ನಟಿ ಇದುವರೆಗೂ ಹಂಚಿಕೊಂಡಿಲ್ಲ.
ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಕೀರ್ತಿ ಸುರೇಶ್ ಅವರು ತಮ್ಮ ಅದ್ಭುತ ನಟನೆ ಮತ್ತು ವಿನಮ್ರ ಸ್ವಭಾವದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಮಲಯಾಳಂ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಅಗ್ರ ನಟಿಯಾಗಿ ಬೆಳೆದರು.
ನಟಿ ಸಾವಿತ್ರಿ ಅವರ ಜೀವನಚರಿತ್ರೆ ಸಿನಿಮಾದಲ್ಲಿನ ಕೀರ್ತಿ ಸುರೇಶ್ ಅಭಿನಯಕ್ಕೆ ಅತ್ಯುತ್ತಮ ನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು.