ಕನ್ನಡ ಚಿತ್ರರಂಗದ ಎರಡು ಅನರ್ಘ್ಯ ರತ್ನಗಳು ರಾಜ್ ಮತ್ತು ವಿಷ್ಣು. ಇವರಿಬ್ಬರ ಹೆಸರಿನಲ್ಲಿ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಇದೀಗ ಇನ್ನೊಂದು ಚಿತ್ರ ಸಿದ್ಧವಾಗುತ್ತಿದ್ದು ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಚಿತ್ರದ ಹೆಸರು ’ರಾಜ್ ವಿಷ್ಣು’.
ಕೆ.ಮಾದೇಶ್ ನಿರ್ದೇಶನದ ಈ ಚಿತ್ರದಲ್ಲಿ ಶರಣ್ ಮತ್ತು ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಇವರಿಬ್ಬರ ಜೋಡಿ ಇದೆ ಎಂದರೆ ಇದೊಂದು ಪಕ್ಕಾ ಕಾಮಿಡಿ ಚಿತ್ರ ಎಂದು ಬಿಡಿಸಿ ಹೇಳಬೇಕಿಲ್ಲ. ಇದುವರೆಗೂ ಸಾಹಸ ಪ್ರಧಾನ, ಅದ್ದೂರಿ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿದ್ದ ರಾಮು ಈ ಚಿತ್ರದ ನಿರ್ಮಾಪಕರು.
ತಮಿಳಿನ ಯಶಸ್ವಿ ಚಿತ್ರ ’ರಜನಿ ಮುರುಗನ್’ ರೀಮೇಕ್ ಇದು. ಕಾಮಿಡಿ ಚಿತ್ರಗಳ ಮಾರುಕಟ್ಟೆ ಯಾವತ್ತಿದ್ರೂ ಒಂದೇ ತೆರನಾಗಿರುತ್ತದೆ ಎಂಬುದು ರಾಮುಗೂ ಅರ್ಥವಾದಂತಿದೆ. ಹಾಗಾಗಿ ಈ ಸಲ ಅವರು ಆಕ್ಷನ್ ಬಿಟ್ಟು ಕಾಮಿಡಿಗೆ ಕೈಹಾಕಿದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ಸಾಧುಕೋಕಿಲ, ರವಿಶಂಕರ್, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಅನೇಕರಿದ್ದಾರೆ. ಮುಂಬೈ ಮೂಲದ ವೈಭವಿ ಚಿತ್ರದ ಹೀರೋಯಿನ್.
ರಾಜೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು ಸಾಹಸ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ ಚಿತ್ರಕ್ಕಿದೆ. ಈಗಾಗಲೆ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ ರಾಜ್ ವಿಷ್ಣು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.