ಬೆಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಪತಿ ಜತಿನ್ ಹುಕ್ಕೇರಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ಕಳೆದ ವರ್ಷ ನವಂಬರ್ 27 ರಂದು ರನ್ಯಾ ಮತ್ತು ಜತಿನ್ ಮದುವೆಯಾಗಿದ್ದರು. ಇತ್ತೀಚೆಗೆ ರನ್ಯಾ ದುಬೈನಿಂದ ಚಿನ್ನ ಅಕ್ರಮ ಸಾಗಣಿಕೆ ಮಾಡುವಾಗ ಸಿಕ್ಕಿಬಿದ್ದಿದ್ದರು. ಇದೀಗ ರನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಅಕ್ರಮದ ಬಗ್ಗೆ ದಿನಕ್ಕೊಂದು ಶಾಕಿಂಗ್ ಸುದ್ದಿಗಳು ಬರುತ್ತಿವೆ.
ಇದರ ನಡುವೆ ಅವರ ಪತಿ ಜತಿನ್ ರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದರೆ ಪ್ರಕರಣದಲ್ಲಿ ಜತಿನ್ ಪಾತ್ರವಿಲ್ಲ ಎಂದು ತಿಳಿದುಬಂದಿತ್ತು. ಈ ನಡುವೆ ತನ್ನನ್ನು ಬಂಧಿಸದಂತೆ ಜತಿನ್ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದರು.
ಮೂಲಗಳ ಪ್ರಕಾರ ಮದುವೆಯಾಗಿ ಒಂದೇ ತಿಂಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯಗಳಾಗಿತ್ತು. ಹೀಗಾಗಿ ಪತಿ-ಪತ್ನಿ ದೂರವಾಗಿಯೇ ಇದ್ದರು ಎನ್ನಲಾಗಿದೆ. ಇದೀಗ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸಿಕ್ಕಿಬಿದ್ದ ಬಳಿಕ ಬೇಸತ್ತ ಪತಿ ಜತಿನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸದ್ಯದಲ್ಲೇ ಅವರು ನ್ಯಾಯಾಲಯಕ್ಕೆ ತಮ್ಮ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಒಂದೇ ತಿಂಗಳಿಗೆ ಮದುವೆಯೂ ಆಗಿತ್ತು. ಈಗ ನಾಲ್ಕೇ ತಿಂಗಳಿಗೆ ವಿಚ್ಛೇದನ ಪಡೆಯುತ್ತಿದ್ದಾರೆ.