ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದರ್ಶನ್ ಜಾಮೀನಿನ ಮೇಲ ಬಿಡುಗಡೆಯಾಗಿ ಈಗ ಮೈಸೂರಿನ ಫಾರ್ಮ್ ಹೌಸ್ ನಲ್ಲಿದ್ದಾರೆ.
ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾಗ ತೀವ್ರ ಬೆನ್ನು ನೋವಿದೆ, ನಡೆದಾಡಲೂ ಕಷ್ಟವಾಗುತ್ತಿದೆ, ಶಸ್ತ್ರಚಿಕಿತ್ಸೆಯಾಗದೇ ಇದ್ದರೆ ಲಕ್ವ ಹೊಡೆಯುತ್ತದೆ ಎಂದು ನೆಪ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ ಒಂದು ತಿಂಗಳ ಕಾಲ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಆದರೆ ಇದುವರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಆಸ್ಪತ್ರೆಯಿಂದ ಹೊರಬರುವಾಗಲೂ ಕುಂಟುತ್ತಲೇ ಮಗನ ಹೆಗಲ ಮೇಲೆ ಕೈ ಹಾಕಿ ಕಾರನ್ನೇರಿ ಮನೆಗೆ ತೆರಳಿದ್ದರು. ಇದೀಗ ಕೋರ್ಟ್ ನಿಂದ ತಾಯಿಯನ್ನು ನೋಡಲು ಅವಕಾಶ ಕೊಡಿ ಎಂದು ಮೈಸೂರಿಗೆ 15 ದಿನಗಳ ಭೇಟಿಗೆ ಅವಕಾಶ ಪಡೆದಿದ್ದಾರೆ.
ಅದರಂತೆ ತಮ್ಮ ಫಾರ್ಮ್ ಹೌಸ್ ಗೇ ತಾಯಿಯನ್ನು ಕರೆಸಿಕೊಂಡಿದ್ದಾರೆ. ಅವರ ಜೊತೆಗೆ ಪತ್ನಿ ವಿಜಯಲಕ್ಷ್ಮಿ, ಸ್ನೇಹಿತ ಧನ್ವೀರ್ ಗೌಡ, ತಾಯಿ ಮೀನಾ ತೂಗುದೀಪ ಸೇರಿದಂತೆ ಎಲ್ಲರೂ ಇದ್ದಾರೆ. ಆದರೆ ಫಾರ್ಮ್ ಹೌಸ್ ನಲ್ಲಿ ಆರಾಮವಾಗಿ ಓಡಾಡಿಕೊಂಡಿರುವ ದರ್ಶನ್ ವಿಡಿಯೋ, ಫೋಟೋಗಳನ್ನು ನೋಡಿ ನೆಟ್ಟಿಗರು ಈಗ ಬೆನ್ನು ನೋವು ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಫಾರ್ಮ್ ಹೌಸ್ ನಲ್ಲೂ ತಮ್ಮ ಮೇಲೆ ಕ್ಯಾಮರಾ ಕಣ್ಣುಗಳಿವೆ ಎಂದು ಗೊತ್ತಾಗುತ್ತಿದ್ದಂತೇ ಗೇಟ್ ಗಳಿಗೆ ಕಪ್ಪು ಪಟ್ಟಿ ಹಾಕಿ ಹೊರಗಿನವರಿಗೆ ಏನೂ ಕಾಣದಂತೆ ನೋಡಿಕೊಂಡಿದ್ದಾರೆ ದರ್ಶನ್. 15 ದಿನ ಇಲ್ಲಿಯೇ ದರ್ಶನ್ ಇರಲಿದ್ದಾರೆ.