ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು ವಿಚಾರವಾಗಿ ಕೊನೆಗೂ ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಸಿಎಂ ಸಿದ್ದರಾಮಯ್ಯ ಭೇಟಿಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಬಾಲಣ್ಣ ಕುಟುಂಬಸ್ಥರು ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ನೆಲಸಮಗೊಳಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಅಭಿಮಾನ್ ಸ್ಟುಡಿಯೋ ಜಾಗವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿತ್ತು.
ಇದು ವಿಷ್ಣುವರ್ಧನ್ ಅಭಿಮಾನಿಗಳ ಹೋರಾಟಕ್ಕೆ ಟ್ವಿಸ್ಟ್ ನೀಡಿದಂತಾಗಿತ್ತು. ಇದರ ಬೆನ್ನಲ್ಲೇ ಈಗ ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಸಿಎಂ ಭೇಟಿ ಮಾಡಿ 10 ಗುಂಟೆ ಸ್ಥಳವನ್ನು ಅಭಿಮಾನಿಗಳಿಗೆ ಬಿಟ್ಟುಕೊಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ.
ಇದಕ್ಕಾಗಿ ನಾಳೆ ಬೆಳಿಗ್ಗೆ 10.30 ಗಂಟೆಗೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ. ಡಾ ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರಿನ ಸ್ಟುಡಿಯೋದಲ್ಲಿನ ಕನಿಷ್ಠ 10 ಗುಂಟೆ ಜಮೀನನ್ನು ಅಭಿಮಾನಿಗಳು ಗೌರವ ಸಮರ್ಪಿಸಲು ಮೀಸಲಿಡುವಂತೆ ವಿನಂತಿಸುವುದು ಈ ಭೇಟಿಯ ಉದ್ದೇಶ ಎಂದು ಅಳಿಯ, ನಟ ಅನಿರುದ್ಧ ಜತ್ಕರ್ ಹೇಳಿದ್ದಾರೆ.