Publish Date: Tue, 29 Aug 2017 (11:30 IST)
Updated Date: Tue, 29 Aug 2017 (11:33 IST)
ಕೊಚ್ಚಿ: ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತೆ ತಿರಸ್ಕೃತವಾಗಿದೆ.
ಇದರೊಂದಿಗೆ ಬಿಡುಗಡೆಯಾಗುವ ಸ್ಟಾರ್ ನಟನ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ದಿಲೀಪ್ ಕಳೆದ 50 ದಿನಗಳಿಂದ ಬಂಧಿಯಾಗಿದ್ದಾರೆ. ಇದು ಎರಡನೇ ಬಾರಿ ಕೇರಳ ಹೈಕೋರ್ಟ್ ದಿಲೀಪ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸುತ್ತಿದೆ.
ಜುಲೈ 24 ರಂದು ಜಾಮೀನು ಅರ್ಜಿ ತಿರಸ್ಕೃತವಾದ ಮೇಲೆ ಆಗಸ್ಟ್ 11 ರಂದು ಮತ್ತೆ ಅರ್ಜಿ ಸಲ್ಲಿಸಿದ್ದರು. ಅದೀಗ ಇಂದು ನ್ಯಾಯಾಲಯ ತಳ್ಳಿ ಹಾಕಿದೆ. ಪ್ರಕರಣದ ತನಿಖೆ ಪೂರ್ಣವಾಗಿಲ್ಲ. ಈ ಸಂದರ್ಭದಲ್ಲಿ ನಟನನ್ನು ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಂಭವವಿದೆ ಎನ್ನುವ ಕಾರಣ ನೀಡಿ ನ್ಯಾಯಾಂಗ ಬಂಧನ ವಿಸ್ತರಿಸಲು ಕೋರ್ಟ್ ಸೂಚಿಸಿದೆ.