ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಏಳು ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರಮ್ಯಾಗೆ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಮೆಸೇಜ್ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ರಮ್ಯಾ ಮೆಸೇಜ್ ಮಾಡಿದ ಬಳಿಕ ದರ್ಶನ್ ಅಭಿಮಾನಿಗಳು ಕೆಟ್ಟ ಸಂದೇಶ ಕಳುಹಿಸುತ್ತಿದ್ದರು. ಇದರ ವಿರುದ್ಧ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ಕೆಲವು ಡಿಬಾಸ್ ಅಭಿಮಾನಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇಂದು ಸುಪ್ರೀಂಕೋರ್ಟ್ ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳ ಬೇಲ್ ಕ್ಯಾನ್ಸಲ್ ಮಾಡುತ್ತಿದ್ದಂತೇ ರಮ್ಯಾ ಖುಷಿ ವ್ಯಕ್ತಪಡಿಸಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದಿದ್ದಾರೆ.
ಸುಪ್ರೀಂಕೋರ್ಟ್ ಇಂದು ನೀಡಿರುವ ತೀರ್ಪು ಕಾನೂನು ಎಲ್ಲರಿಗೂ ಒಂದೇ ಎಂಬ ಪ್ರಬಲ ಸಂದೇಶ ನೀಡಿದೆ. ಕಾನೂನು, ನ್ಯಾಯದ ಮೇಲೆ ವಿಶ್ವಾಸವಿಡಿ. ಈ ವ್ಯವಸ್ಥೆ ಮೇಲೆ ನಂಬಿಕೆಯಿರಲಿ ಎಂದು ನಾನು ಹೇಳಲು ಬಯಸುತ್ತೇನೆ. ಎಷ್ಟೇ ಉದ್ದದ ಕತ್ತಲಿನ ಮಾರ್ಗವಿರಬಹುದು ಕೊನೆಯಲ್ಲಿ ಒಂದು ಬೆಳಕು ಇದ್ದೇ ಇರುತ್ತದೆ. ಯಾವತ್ತೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವತ್ತೂ ನಡೆಯಬೇಡಿ ಎಂದಿದ್ದಾರೆ.