ಬೆಂಗಳೂರು: ಕನ್ನಡದ ಪ್ರತಿಭಾವಂತ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಸಿನಿಮಾ ರಂಗಕ್ಕೇ ಗುಡ್ ಬೈ ಹೇಳುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣ ಅವಕಾಶಗಳ ಕೊರತೆ.
ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರ್ ಸ್ಟಾರ್ ಜೆಕೆ ಆಗಿ ಖ್ಯಾತಿ ಪಡೆದ ಅವರು ಬಳಿಕ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅಲ್ಲದೆ ಹಿಂದಿ ಧಾರವಾಹಿಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡರು. ಆದರೆ ಈಗ ತಮ್ಮವರೇ ತಮ್ಮನ್ನು ಬೆಳೆಯಲು ಬಿಡುತ್ತಿಲ್ಲ ಎಂದು ನೋವಿನಿಂದ ಜೆಕೆ ಸಿನಿಮಾ ರಂಗಕ್ಕೇ ಗುಡ್ ಬೈ ಹೇಳಲು ತೀರ್ಮಾನಿಸಿದ್ದಾರೆ. ಕೆಲವು ದಿನಗಳ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದರು. ಆದರೆ ಬಳಿಕ ಗೆಳೆಯರು, ಫ್ಯಾನ್ಸ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಡಿಲೀಟ್ ಮಾಡಿದ್ದರು.
ಆದರೆ ಈಗ ಮಾಧ‍್ಯಮಗಳ ಮುಂದೆಯೇ ತಾವು ಸಿನಿಮಾ ರಂಗದಿಂದ ದೂರವಾಗಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ. ಹಿಂದಿಯಲ್ಲಿ ಸಾಕಷ್ಟು ಅವಕಾಶವಿದ್ದರೂ ಕನ್ನಡದ ಮೇಲಿನ ಪ್ರೀತಿಗಾಗಿ ಇಲ್ಲಿಯೇ ಉಳಿದೆ. ಆದರೆ ಇಲ್ಲಿ ನನ್ನನ್ನು ನಮ್ಮವರೇ ತುಳಿಯುತ್ತಿದ್ದಾರೆ. ಬೆಳೆಯಲು ಬಿಡುತ್ತಿಲ್ಲ. ಗೌರವ ಇಲ್ಲದ ಕಡೆ ಇರಬಾರದು. ನನಗೆ ಅವರ ಮೇಲೆ ಧ್ವೇಷ ಸಾಧಿಸಲು ಗೊತ್ತಿಲ್ಲ. ಮೊದಲೆಲ್ಲಾ ಹೆಸರು ಗಳಿಸಬೇಕು ಎಂದು ಹಾತೊರೆಯುತ್ತಿದ್ದೆ. ಆದರೆ ಈಗ ಹಣ ಗಳಿಸಲು ಮಾರ್ಗವಿದ್ದರೆ ಸಾಕು ಎನಿಸಿದೆ. ಹೀಗಾಗಿ ಇದಕ್ಕೆ ಬೇರೆ ದಾರಿಗಳಿವೆ. ಸಿನಿಮಾವೇ ಆಗಬೇಕೆಂದೇನಿಲ್ಲ. ಹಾಗಾಗಿ ಚೆನ್ನಾಗಿದ್ದಾಗಲೇ ಇಂಡಸ್ಟ್ರಿ ಬಿಡುವ ತೀರ್ಮಾನ ಮಾಡಿದ್ದೇನೆ ಎಂದಿದ್ದಾರೆ.