ಬೆಂಗಳೂರು: ಡೆವಿಲ್ ಶೂಟಿಂಗ್ ನಿಮಿತ್ತ ಥೈಲ್ಯಾಂಡ್ ಗೆ ತೆರಳಿದ್ದ ನಟ ದರ್ಶನ್ ನಿನ್ನೆ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ವಿವಿಐಪಿ ಭದ್ರತೆಯಲ್ಲಿ ಮನೆಗೆ ತೆರಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಗೆಂದು 10 ದಿನಗಳ ಹಿಂದೆ ಕೋರ್ಟ್ ಅನುಮತಿ ಪಡೆದು ಥೈಲ್ಯಾಂಡ್ ತೆರಳಿದ್ದರು. ಇಲ್ಲಿ ಶೂಟಿಂಗ್ ನಡುವೆ ಸ್ನೇಹಿತರ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿತ್ತು.
ಇದೀಗ ಶೂಟಿಂಗ್ ಕೆಲಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಬಿಗಿ ಭದ್ರತೆಯಲ್ಲಿ ದರ್ಶನ್ ಏರ್ ಪೋರ್ಟ್ ನಿಂದ ಹೊರಬಂದಿದ್ದಾರೆ. ಈ ವೇಳೆ ಯಾರ ಜೊತೆಗೂ ಮಾತನಾಡದೇ ಕಾರು ಏರಿ ಹೊರಟಿದ್ದಾರೆ.
ಇನ್ನು ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ. ಮೊನ್ನೆಯಷ್ಟೇ ಅವರ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಜಾಮೀನು ರದ್ದುಗೊಳಿಸಿದರೆ ಮತ್ತೆ ದರ್ಶನ್ ಜೈಲು ಸೇರಬೇಕಾಗುತ್ತದೆ. ಹೀಗಾಗಿ ದರ್ಶನ್ ಗೆ ಈಗ ಮಹತ್ವದ ಸಮಯವಾಗಿದೆ.