Select Your Language

Notifications

webdunia
webdunia
webdunia
webdunia

ಉಪೇಂದ್ರ-ಶಿವರಾಜ್ 'ಓಂ' ಚಿತ್ರಕ್ಕೀಗ ಸೀಕ್ವೆಲ್ ಕಾಟ!

ಓಂ
PR
'ಓಂ' ಚಿತ್ರದಲ್ಲಿ ಲಾಂಗು ಹಿಡಿದಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೆ ಲಾಂಗು ಹಿಡಿದು ನೋಡಿದರು. ಅಷ್ಟೇ ಉದ್ದದ ಲಾಂಗು, ಅಂತಹುದೇ ಕಥೆ. ಆದರೆ ಅದು ಇನ್ನೊಂದು 'ಓಂ' ಆಗಲಿಲ್ಲ. ಶಿವಣ್ಣ ಅಷ್ಟೇ ಯಾಕೆ, ತಾನೂ ಒಂದು ಕೈ ನೋಡೋಣ ಅಂತ ಸ್ವತಃ 'ಓಂ' ನಿರ್ಮಾತೃ - ರಿಯಲ್ ಸ್ಟಾರ್ ಉಪೇಂದ್ರ 'ಓಂಕಾರ' ಹಾಕಿದರು. ಫಲಿತಾಂಶ ಮಾತ್ರ ಶೂನ್ಯ.

ಆದರೆ ನೆನಪಿಡಿ, ಶಿವಣ್ಣ ಆಗಲೀ ಅಥವಾ ಉಪೇಂದ್ರ ಆಗಲೀ -- ಯಾವತ್ತೂ 'ಓಂ' ಭಾಗ-2 ಮಾಡಲು ಹೋಗಲೇ ಇಲ್ಲ. ಇಂದಿಗೂ ಮತ್ತೆ ಮತ್ತೆ ಬಿಡುಗಡೆಯಾಗುತ್ತಿರುವ, ಇನ್ನೂ ಸ್ಯಾಟಲೈಟ್ ಹಕ್ಕುಗಳು ಮಾರಾಟ ಆಗದೇ ಇರುವ 'ಓಂ' ಮುಂದುವರಿದ ಭಾಗ ಮಾಡೋಣ ಅಂತ ಯಾವತ್ತೂ ಹೊರಡಲಿಲ್ಲ.

ಆದರೆ ಈಗ ಹಲವರು ಹೊರಟಿದ್ದಾರೆ. ಅವರಲ್ಲಿ ಶಿವಣ್ಣ ಅಥವಾ ಉಪ್ಪಿ ಇದ್ದಾರೆ ಎಂದು ಯಾರೂ ಭಾವಿಸಬೇಕಿಲ್ಲ. ಈಗ 'ಓಂ' ಮುಂದುವರಿದ ಭಾಗ ಮಾಡುತ್ತೇವೆ ಅಂತ ಹೊರಟಿರುವವರು ಅದೇ ಡೆಡ್ಲಿ ರವಿ ಶ್ರೀವತ್ಸ. ಇನ್ನೊಂದು '90' ಖ್ಯಾತಿಯ ಲಕ್ಕಿ ಶಂಕರ್!

ರವಿ ಶ್ರೀವತ್ಸ ಗೊತ್ತಲ್ವೇ? 'ಗಂಡ ಹೆಂಡತಿ'ಯಿಂದ ಹೆಸರು ಕೆಡಿಸಿಕೊಂಡು, ಒಂದು ಹಂತದಲ್ಲಿ ಗೆದ್ದರೂ ಈಗ ಸಾಕಷ್ಟು ಸರ್ಕಸ್ ಮಾಡುತ್ತಿರುವವರು. 'ಈ ರಾಜೀವ್ ಗಾಂಧಿ ಅಲ್ಲ' ಅಂತ ಹೇಳಲು ಹೊರಟರೂ, ಒಪ್ಪಿಗೆ ಸಿಗದೇ ಇದ್ದಾಗ 'ರಾಜೀವ್ ಅಲ್ಲ ಗೋಡ್ಸೆ' ಎಂದು ಹೆಸರಿಟ್ಟರು. ಅದೇ ರವಿ ಈಗ 'ಓಂ 2' ಎಂಬ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದಾರೆ. ಅಷ್ಟೇ ಅಲ್ಲ, 'ಮುತ್ತು ನಮ್ಮಪ್ಪ' ಮತ್ತು 'ಭೀಮಾ ತೀರದ ಹಂತಕರು' ಎಂಬ ಎರಡು ಶೀರ್ಷಿಕೆಗಳಿಗೂ ತಾನೇ ವಾರಸುದಾರ ಎಂದು ಹೇಳುತ್ತಿದ್ದಾರೆ.

ಇನ್ನು ಸಾಧು ಕೋಕಿಲಾ ಅವರಿಗೆ '90' ಕುಡಿಸಿ ಈಗ 'ದೇವರಾಣೆ'ಯಲ್ಲಿ ಬ್ಯುಸಿಯಾಗಿರುವ ಲಕ್ಕಿ ಶಂಕರ್ ಕೂಡ 'ಓಂ' ಹಿಂದೆ ಬಿದ್ದಿದ್ದಾರೆ. ಅವರು 'ಓಂ 2012' ಎಂಬ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದಾರೆ. ಶಂಕರ್ 'ಓಂ' ಮುಂದುವರಿದ ಭಾಗ ಮಾಡುತ್ತಾರೋ ಅಥವಾ ಬೇರೆಯದೇ ಕಥೆಯನ್ನು ತೋರಿಸುತ್ತಾರೋ ಅನ್ನೋದು ಗೊತ್ತಾಗಿಲ್ಲ.

ಇತ್ತೀಚೆಗಷ್ಟೇ 'ದಂಡುಪಾಳ್ಯ -2' ನೋಂದಣಿಯಾಗಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. 'ದಂಡುಪಾಳ್ಯ' ಚಿತ್ರಕ್ಕೆ ಸಂಬಂಧಪಡದೇ ಇರುವ ನಿರ್ಮಾಪಕ-ನಿರ್ದೇಶಕರು ಆ ಚಿತ್ರದ ಭಾಗ ಎರಡನ್ನು ಮಾಡಲು ಹೊರಟಿದ್ದರು. ಇದನ್ನು ತಡೆಯಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಕಾರಣ, ಅಲ್ಲಿರುವ ನಿಯಮಾವಳಿಗಳು.

ಇನ್ನು ಹಳೆ ಚಿತ್ರಗಳ ಮುಂದುವರಿದ ಭಾಗಗಳನ್ನು ಯಾರು ಬೇಕಾದರೂ ಮಾಡಬಹುದು. ಯಾವುದೇ ಚಿತ್ರ ಬಿಡುಗಡೆಯಾದ 10 ವರ್ಷಗಳ ನಂತರ ಅದೇ ಹೆಸರಿನಲ್ಲಿ ಯಾರು ಬೇಕಾದರೂ ಬೇರೆ ಚಿತ್ರ ಮಾಡಬಹುದು. ಹಾಗಂತ ವಾಣಿಜ್ಯ ಮಂಡಳಿಯ ಕಾನೂನು ಹೇಳುತ್ತದೆ.

Share this Story:

Follow Webdunia kannada