ಕಳೆದ ವಾರ ನನ್ನ ಹಿಮಾಚಲ ಪ್ರದೇಶದ ಮಿತ್ರನೊಬ್ಬ ನನಗೆ ವಿಚಿತ್ರ ಪತ್ರವೊಂದನ್ನು ಬರೆದ. ಸ್ನಾನಕ್ಕೆಂದು ಆತ ಹೋದಾಗ ಟ್ಯಾಪಿನಲ್ಲಿ ನೀರು ಬರಲಿಲ್ಲ ಎಂಬ ಕಾರಣಕ್ಕೆ ಆತ ಯಾವತ್ತೂ ಕಾಂಗ್ರೆಸಿಗೆ ನೀಡುತ್ತಿದ್ದ ಓಟನ್ನು ಬಿಜೆಪಿಗೆ ನೀಡಿದನಂತೆ. ಅದೇ ರೀತಿ ರಿಕ್ಷಾವಾಲಾನಿಗೆ ಕಾಡುವ ಸಂಗತಿಯೆಂದರೆ, ತನ್ನ ದೈನಂದಿನ ಗಳಿಕೆಯ ಐದನೇ ಒಂದು ಅಂಶವನ್ನು ಪೊಲೀಸನೊಬ್ಬ ಹಫ್ತಾ ರೂಪದಲ್ಲಿ ತೆಗೆದುಕೊಳ್ಳುವುದು. ರೈತನ ಯೋಚನೆಯೆಂದರೆ, ಗ್ರಾಮ ಪಂಚಾಯತಿನ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ಲಂಚ ನೀಡದೆ ತನ್ನ ಜಮೀನಿನ ಹಕ್ಕುಪತ್ರ ಮಾಡಿಸಿಕೊಳ್ಳುವುದು. ಕೊಳೆಗೇರಿಯಲ್ಲಿನ ಅಸ್ವಸ್ಥ ಮಹಿಳೆಯು ಯಾಚಿಸುವುದು ತಾನು ಹೋದಾಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ವೈದ್ಯ ಇರಬೇಕು ಎಂಬುದನ್ನು. ಹಳ್ಳಿಯ ಶಾಲೆಯಲ್ಲಿ ಒಬ್ಬ ಟೀಚರ್ ಇರಬೇಕು, ತನ್ನ ಮಕ್ಕಳಿಗೆ ಅವರು ಪಾಠ ಹೇಳಿಕೊಡಬೇಕು ಎಂಬುದು ಗೃಹಿಣಿಯೊಬ್ಬಳ ಇಂಗಿತ. ಸರಕಾರವೆಂಬುದು ಜನಸಾಮಾನ್ಯರನ್ನು ತಟ್ಟುವುದು ಈ ರೀತಿ. ಪ್ರತಿಯೊಂದು ಸರಕಾರವು ವಿಫಲವಾಗುವುದೂ ಈ ಕ್ಷೇತ್ರದಲ್ಲೇ!
ದೈನಂದಿನ ವ್ಯವಹಾರದಲ್ಲಿ ಸರಕಾರದ ಈ ವೈಫಲ್ಯಗಳ ಪರಿಸ್ಥಿತಿಗಳಲ್ಲಿ, ಜನ ಸಾಮಾನ್ಯ ಏನು ಮಾಡಬೇಕು? ಹತಾಶೆಯಲ್ಲಿ ಆತ ತನ್ನ ಕೋಪ ತೋರಿಸಿಕೊಳ್ಳುವುದು ತನ್ನ ಮತವನ್ನು ಮತ್ತೊಬ್ಬರಿಗೆ ನೀಡುವ ಮೂಲಕ. ಅಂದರೆ ಆತ ರಾಜಕೀಯ ಮೂರ್ಖರ ಒಂದು ಸಮೂಹದ ಬದಲು ಮತ್ತೊಂದಕ್ಕೆ ಅವಕಾಶ ನೀಡುತ್ತಾನೆ ಅಷ್ಟೇ. “ಆಡಳಿತ ವಿರೋಧಿ ಅಲೆ” ಅಂತ ನಾವೇನನ್ನು ಕರೆಯುತ್ತೇವೆಯೋ ಅದು ಸರಕಾರದ ದೈನಂದಿನ ಕೆಲಸ ಕಾರ್ಯಗಳಲ್ಲಿನ ವೈಫಲ್ಯದ ಪ್ರತೀಕ. ನಮ್ಮ ಸ್ಥಳೀಯ, ರಾಜ್ಯ, ಕೇಂದ್ರ ಸರಕಾರಗಳನ್ನು ಭ್ರಷ್ಟಾಚಾರ ಎಂಬುದು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆಯೆಂದರೆ, ಅವುಗಳಿಗೆ ಜನಸಾಮಾನ್ಯನಿಗೆ ಮೂಲಭೂತ ಸೌಲಭ್ಯಗಳಾದ ಒಂದು ಒಳ್ಳೆಯ ಶಾಲೆ, ಒಂದು ಒಳ್ಳೆಯ ಪ್ರಾಥಮಿಕ ಆರೋಗ್ಯ ೇಕಂದ್ರ, ಮತ್ತು ಉತ್ತಮ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸಲಾಗುತ್ತಿಲ್ಲ. ರಾಜಕಾರಣಿಗಳು ಇದರಿಂದ ಪಾಠ ಕಲಿಯುತ್ತಾರೆ ಅಂತ ನೀವು ಭಾವಿಸುತ್ತೀರಾ?
ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳನ್ನು ದೂರುವುದು ತುಂಬಾ ಸುಲಭ. ಆದರೆ ಅವರಿಗಿಂತಲೂ ದೊಡ್ಡ ತಪ್ಪಿತಸ್ಥರು ಎಂದರೆ ಅಧಿಕಾರಶಾಹಿ. ಸರಕಾರದ ಕುರಿತು ನಮ್ಮ ಅಸಮಾಧಾನದ ಬೆಂಕಿಗೆ ಹೆಚ್ಚು ತುಪ್ಪ ಸುರಿಯುವುದೇ ಈ ಅಧಿಕಾರಶಾಹಿ. ನಮ್ಮನ್ನು ಅತ್ಯಂತ ನಿರಾಶೆಗೀಡುಮಾಡುತ್ತಿರುವುದು ಕೂಡ ಅದುವೇ. ನಾವು ಯುವಕರಾಗಿದ್ದಾಗ ಇಂಗ್ಲೆಂಡಿನಿಂದಲೇ ವಂಶಪಾರಂಪರ್ಯವಾಗಿ ಬಂದಿರುವ ಭಾರತೀಯ ಪೌರ ಸೇವೆ (ಐಸಿಎಸ್)ನ ಉಕ್ಕಿನ ಹಿಡಿತವನ್ನು ಖರೀದಿಸಿದೆವು. ಜವಾಹರಲಾಲ್ ನೆಹರೂ ಕೂಡ ಹೇಳಿದ್ದರು- ಬ್ರಿಟನಿನಲ್ಲಿ ಉತ್ತಮ ಆಡಳಿತ ಇಲ್ಲದಿರುವುದಕ್ಕೆ ಕಾರಣವೆಂದರೆ ಅಲ್ಲಿ ಭಾರತೀಯ ಪೌರ ಸೇವೆ ಇಲ್ಲ ಅಂತ. ಇಂದು ನಮ್ಮ ಅಧಿಕಾರಶಾಹಿಯು ಪ್ರಗತಿಗೆ ಏಕೈಕ ಅತಿದೊಡ್ಡ ತಡೆಗೋಡೆಯಾಗಿ ಬೆಳೆದುನಿಂತಿದೆ. ಭಾರತೀಯರಲ್ಲಿ ಅಧಿಕಾರಶಾಹಿಯ ಬಗ್ಗೆ ಯಾವ ಭಾವನೆ ಇದೆ ಎಂದರೆ, ಅವರು “ಸ್ವಯಂ” ಸೇವಕರು, ಬಾಡಿಗೆ ಕೇಳುವವರು, ಅಡ್ಡಿಯಾಗುವವರು ಮತ್ತು ಭ್ರಷ್ಟರು. ಆರ್ಥಿಕ ಸುಧಾರಣೆಗಳನ್ನು ಪೋಷಿಸುವ ಬದಲು, ಅದಕ್ಕೆ ತಡೆಯಾಗುವಲ್ಲಿ ಅವರೇ ಕಾರಣರಾಗುತ್ತಿದ್ದಾರೆ.
ಐವತ್ತರ ದಶಕದಲ್ಲಿ, ತಮ್ಮ “ಸಮ್ಮಿಶ್ರ ಆರ್ಥಿಕತೆ”ಗೆ ನಿಯಂತ್ರಕ ಚೌಕಟ್ಟು ಬೇಕೆಂದು ನೆಹರೂ ಬಯಸಿದ್ದಾಗ, ಅಧಿಕಾರಿಗಳು ಅವರಿಗೆ ನೀಡಿದ್ದು “ಲೈಸೆನ್ಸ್ ರಾಜ್”. ಸಾಮಾಜಿಕತೆಯ ಪವಿತ್ರ ಹೆಸರಿನಲ್ಲಿ ಅವರು ಸಾವಿರಾರು ನಿಯಂತ್ರಣಗಳನ್ನು ಸ್ಥಾಪಿಸಿದರು ಮತ್ತು ನಮ್ಮ ಕೈಗಾರಿಕಾ ಕ್ರಾಂತಿಯನ್ನು ಹುಟ್ಟಿನಲ್ಲೇ ಚಿವುಟಿಹಾಕಿದರು. ವ್ಯಾವಹಾರಿಕ ಜಗತ್ತಿನಲ್ಲಿ ಸಕ್ರಿಯನಾಗಿದ್ದ 30 ವರ್ಷಗಳಲ್ಲಿ, ನನ್ನ ವ್ಯವಹಾರವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಬಲ್ಲ ಒಂದೇ ಒಂದು ಅಧಿಕಾರಿಯನ್ನೂ ನಾನು ಭೇಟಿಯಾಗಿಲ್ಲ. ಆದರೂ ಆತನಿಗೆ ಅದನ್ನು ಹಾಳುಗೆಡಹುವ ಎಲ್ಲಾ ಅಧಿಕಾರಗಳಿವೆ! ಕೊನೆಯಲ್ಲಿ, ನಮ್ಮ ವೈಫಲ್ಯಕ್ಕೆ ದೊಡ್ಡ ಕಾರಣವೆಂದರೆ ತಾತ್ವಿಕತೆಯಲ್ಲ, ಬದಲಾಗಿ ಕಳಪೆ ಸಾರ್ವಜನಿಕ ಆಡಳಿತ.
ಹಾಗಿದ್ದರೆ, ಸರಕಾರದ ಅನಾರೋಗ್ಯಕ್ಕೆ ಕಾರಣ ಯಾವುದು? ಸ್ವರ್ಗದಿಂದಲೇ ಉದಿಸಿದಂತಿರುವ ಪೌರ ಸೇವಕರು ನಮ್ಮನ್ನು ಇಷ್ಟರ ಮಟ್ಟಿಗೆ ತುಳಿಯುತ್ತಾರೇಕೆ? ಭಾರತದ ಕೇಂದ್ರೀಯ, ರಾಜ್ಯ ಮತ್ತು ಸ್ಥಳೀಯ ಸರಕಾರಗಳ ನೌಕರರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲವೇಕೆ? ತಮಗೆ ಹೊಣೆಗಾರಿಕೆ ಇಲ್ಲ ಎಂಬ ಭಾವನೆಯೊಂದಿಗೆ ಅವರು ಕಾರ್ಮಿಕ ಕಾಯಿದೆಗೆ ಅತೀತರಾಗಿರುವುದು ಇದಕ್ಕೆ ಕಾರಣವೇ? ಭಾಗಶಃ ಇದು ಹೌದು. ಎಡಪಕ್ಷಗಳು ಮತ್ತು ಅವುಗಳ ಕಾರ್ಮಿಕ ಸಂಘಟನೆಗಳ ಮೇಲೆಯೇ ನಿಂತಿರುವ ಈಗಿನ ಸರಕಾರದಿಂದ ಕಾರ್ಮಿಕ ಸುಧಾರಣೆಗಳ ಬಗ್ಗೆ ಭರವಸೆ ಇಟ್ಟು ಕೊಳ್ಳಬೇಕಿಲ್ಲ. ಆದರೂ, ನಮ್ಮ ಮೂಗಿನ ಕೆಳಗೆಯೇ ನಮಗೆ ಅದ್ಭುತ ಉದಾಹರಣೆಗಳು ದೊರೆಯುತ್ತವೆ- ಅವೆಂದರೆ ದೆಹಲಿ ಮೆಟ್ರೋ ರೈಲು, ಇಂದೋರಿನಲ್ಲಿ ವಿಶಿಷ್ಟ ಬಸ್ ಸೇವೆ, ಬಿ.ಸಿ.ಖಂಡೂರಿ ಮುಖ್ಯಸ್ಥರಾಗಿದ್ದಾಗ ರಾಷ್ಟ್ರೀಯ ಹೆದ್ದಾರಿಗಳ ಅದ್ಭುತ ಮತ್ತು ವೇಗದ ಪ್ರಗತಿ. ಇವುಗಳೆಲ್ಲಾ ಅಪವಾದ ಅಂತ ಅನ್ನಿಸಬಹುದು, ಆದರೂ ಇದು ಸಾಧ್ಯ ಎಂಬುದನ್ನು ಕೂಡ ಅವರು ತೋರಿಸಿಕೊಟ್ಟಿದ್ದಾರೆ.
2004ರ ಸ್ವಾತಂತ್ರ್ಯ ದಿನದಂದು, ತಮ್ಮ ಚುನಾವಣೆಯಾದ ಕೆಲವೇ ತಿಂಗಳಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ಘೋಷಿಸಿದ್ದೇನೆಂದರೆ, ನಮ್ಮ ಸರಕಾರಗಳು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಿಸಲು ಆದ್ಯತೆ ನೀಡುತ್ತೇವೆ ಎಂಬುದಾಗಿ. ಬಡವರಿಗೆ ಸೇವೆಯ ಸೌಲಭ್ಯಗಳ ವಿತರಣೆಯನ್ನು ಸುಧಾರಿಸುತ್ತೇವೆ, ಅಧಿಕಾರಶಾಹಿಗಳ ಕೈಯಿಂದ ಯೋಜನೆಗಳ ಅನುಷ್ಠಾನವನ್ನು ಸುಧಾರಿಸುತ್ತೇವೆ ಎಂದಿದ್ದರವರು. ನಾವು ಮನಮೋಹನ್ ಸಿಂಗ್ ಮಾತುಗಳನ್ನು ಗಂಭೀರವಾಗಿಯೇ ಪರಿಗಣಿಸಿದೆವು ಮತ್ತು ಭಾರೀ ಆಶಾವಾದಿಗಳಾಗಿದ್ದೆವು. ಈಗ ಮೂರುವರೆ ವರ್ಷ ಸಂದುಹೋಗಿದೆ, ಏನೂ ಆಗಲಿಲ್ಲ. ನಾವು ಅದೇ ನಿರಾಶೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದೇವೆ. ಆಡಳಿತದಲ್ಲಿ ಗಮನಾರ್ಹವಾದ ಸುಧಾರಣೆಯೇನೂ ನಡೆಯಲಿಲ್ಲ. ಸರಕಾರಿ ನೌಕರರು ಒರಟರಾಗಿ, ಭ್ರಷ್ಟರಾಗಿ, ಹೊಣೆಗೇಡಿಗಳಾಗಿಯೇ ಉಳಿದಿದ್ದಾರೆ. ಅವರು ಕೆಲಸ ಮಾಡಿದರೂ, ಮಾಡದಿದ್ದರೂ ಪ್ರೊಮೋಷನ್ ಪಡೆಯುತ್ತಿದ್ದಾರೆ.
ಹಾಗಾದರೆ ಇದಕ್ಕೇನು ಉತ್ತರ? ಸ್ಪಷ್ಟವಾಗಿ ಹೇಳಬೇಕೆಂದರೆ, ಹೆಚ್ಚಿನ ಭಾರತೀಯರು ಬಲವಾಗಿ ನಂಬಿರುವಂತೆ, ಅಧಿಕಾರಶಾಹಿಯನ್ನೇ ಅಳಿಸಿಹಾಕುವುದರಿಂದ ಇದಕ್ಕೆ ಉತ್ತರ ದೊರೆಯದು. ನಾವೇ ನಮ್ಮ ಸರಕಾರಕ್ಕೆ ಅಂಕುಶ ಹಾಕಬೇಕು ಮತ್ತು ಫಲಿತಾಂಶಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಬ್ರಿಟನ್‌ನತ್ತ ನೋಡಿ. 1979ರಲ್ಲಿ ಇರುವುದಕ್ಕಿಂತ ಈಗ ಅಲ್ಲಿ ಶೇ.40ರಷ್ಟು ಸರಕಾರಿ ನೌಕರರು ಕಡಿಮೆಯಿದ್ದಾರೆ. ಇದರಿಂದ ಬಿಲಿಯಗಟ್ಟಲೆ ಪೌಂಡ್ ಹಣ ಉಳಿತಾಯವಾಗಿದೆಯಷ್ಟೇ ಅಲ್ಲ, ಆಡಳಿತವೂ ಸಾಕಷ್ಟು ಸುಧಾರಣೆಯಾಗಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳನ್ನು ಗಮನಿಸಿ. ಅಲ್ಲಿ ಪೌರ ಸೇವಾ ವಿಭಾಗವನ್ನು ಫಲಿತಾಂಶ-ಮುಖಿಯಾಗಿಸಿದ್ದಾರೆ ಮತ್ತು ಜವಾಬ್ದಾರರನ್ನಾಗಿಸಿದ್ದಾರೆ. ಅವರು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಉದ್ಯೋಗವೇ ಖೋತಾ.
ನಮ್ಮ ಸರಕಾರದ ಗಾತ್ರವನ್ನು ಕಡಿತಗೊಳಿಸುವುದು ಮನಮೋಹನ್ ಸಿಂಗ್ ಅವರಿಗೆ ಸುಲಭವಲ್ಲ (ಎಡಪಕ್ಷಗಳು ಬಿಡಬೇಕಲ್ಲ...), ಆದರೆ ಅವರು ನಮ್ಮ ಅಧಿಕಾರಶಾಹಿಯನ್ನು ಫಲಿತಾಂಶ-ಮುಖಿಯಾಗಿಸಬಲ್ಲರು ಮತ್ತು ಹೆಚ್ಚು ಹೊಣೆಗಾರಿಕೆಯುಳ್ಳ ಪ್ರಜೆಗಳಾಗುವಂತೆ ಮಾಡಬಲ್ಲರು. ಮತ್ತೊಂದು ಸುಧಾರಣಾ ಆಯೋಗ ಹುಟ್ಟುಹಾಕುವ ಮೂಲಕ ಅವರು ಮತ್ತೊಂದು ತಪ್ಪೆಸಗಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಸಾಕಷ್ಟು ಆಡಳಿತ ಸುಧಾರಣಾ ವರದಿಗಳು ಬಂದಿದ್ದು, ಅವಿನ್ನೂ ಧೂಳು ತಿನ್ನುತ್ತಾ ಇವೆ. ಅವರಿಗೆ ಈಗ ಬೇಕಿರುವುದು ಬಹುಶಃ ಸಂಪುಟ ಕಾರ್ಯದರ್ಶಿ ಉಸ್ತುವಾರಿಯ ಅನುಷ್ಠಾನ ಆಯೋಗವೇ ಹೊರತು ಸುಧಾರಣಾ ಆಯೋಗವಲ್ಲ.
1991-1993ರ ಅವಧಿಯಲ್ಲಿ ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಪಿ.ವಿ.ನರಸಿಂಹ ರಾವ್ ಅವರ ಅದ್ಭುತ ಕಾರ್ಯಸಾಧನೆಯ ಇತಿಹಾಸವನ್ನು ಮನಮೋಹನ್ ಸಿಂಗ್ ಹಿಂತಿರುಗಿ ನೋಡಿದರೆ ಅವರಿಗೆ ಸ್ಫೂರ್ತಿ ಬಂದೀತು. ಅವರು ಸುಧಾರಣಾವಾದಿಗಳಾದ ಇಬ್ಬರನ್ನು - ಮನಮೋಹನ್ ಸಿಂಗ್ ಮತ್ತು ಪಿ.ಚಿದಂಬರಂ- ಅವರನ್ನು ಕರೆತಂದರು. ಮಾತ್ರವಲ್ಲ ಜೊತೆಗೆ, ಮತ್ತೊಬ್ಬ ಕಾರ್ಯ ಸಾಧಕ, ತಮ್ಮ ಪ್ರಿನ್ಸಿಪಲ್ ಕಾರ್ಯದರ್ಶಿ ಎ.ಎನ್.ವರ್ಮಾರನ್ನೂ ಕರೆತಂದರು. ಅವರ ಕಚೇರಿಯೇ ಈ ಸುಧಾರಣೆಗಳ ಕಂಟ್ರೋಲ್ ರೂಂ ಆಗಿ ಕಾರ್ಯ ನಿರ್ವಹಿಸಿತು. ವಿಷಾದಕರ ಅಂಶವೆಂದರೆ ಈ ವರ್ಮಾ ಅವರು ಅನುಷ್ಠಾನದ ದೈನಂದಿನ ವೇಗವನ್ನು ನಿಯಂತ್ರಿಸುತ್ತಾ, ಮೌನ ಸೇವೆ ಮಾಡುತ್ತಿದ್ದುದನ್ನು ಯಾರೂ ಕೂಡ ಶ್ಲಾಘಿಸಲೇ ಇಲ್ಲ.
ಸುಧಾರಣೆಗಳನ್ನು ಅನುಷ್ಠಾನಗೊಳಿಸಲು, ಸೂಕ್ತ ರಚನಾತ್ಮಕ ಮಾದರಿಯನ್ನು ರಚಿಸಲು ರಾವ್ ಅವರು ವರ್ಮಾರನ್ನು ಪ್ರೋತ್ಸಾಹಿಸಿದರು. ತತ್ಪರಿಣಾಮವೇ ಪ್ರಖ್ಯಾತ (ಆರ್ಥಿಕ ಸಚಿವಾಲಯಗಳ) “ಕಾರ್ಯದರ್ಶಿಗಳ ಗುರುವಾರ-ಸಮಿತಿ” ರಚನೆ. ಇದು ವಾರದಿಂದ ವಾರಕ್ಕೆ ಸುಧಾರಣೆಗಳನ್ನು ಸಂಘಟಿಸಿತು, ಮೇಲ್ವಿಚಾರಣೆ ಮಾಡಿತು, ಸಂಪುಟದ ಒಪ್ಪಿಗೆ ಪಡೆಯಿತು. ವರ್ಮಾ ಅವರು ತಮ್ಮ ಸಮಿತಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮುನ್ನಡೆಸಿದರು. ಪ್ರತೀ ಗುರುವಾರದ ದಿನ ಯಾರು ಕೂಡ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡಲಿಲ್ಲ. ಸಮಿತಿಯು ಆ ದಿನ ಕೇವಲ ಎರಡು ಗಂಟೆ ಮಾತ್ರ ಸಭೆ ನಡೆಸುತ್ತದೆ. ಅಲ್ಲಿ ಸಂಬಂಧಪಟ್ಟ ಸುಧಾರಣೆಯ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲಾಗುತ್ತದೆ. ವರ್ಮಾ ಅವರು ಸಭೆಯ ಒಟ್ಟಭಿಪ್ರಾಯವನ್ನು ಸೇರಿಸಿ, ಫಲಿತಾಂಶವನ್ನು ದಾಖಲಿಸಿಟ್ಟುಕೊಳ್ಳುತ್ತಿದ್ದರು. ಅದೇ ದಿನವೇ ಆ ಸುಧಾರಣೆಯ ಪ್ರಸ್ತಾಪವನ್ನು ಅನುಮತಿಗಾಗಿ ಸಂಪುಟದ ಮುಂದೆ, ಮುಂದಿನ ವಾರದಲ್ಲಿ ಅದನ್ನು ಸಂಸತ್ತಿನ ಮುಂದೆ ಮಂಡಿಸಲಾಗುತ್ತಿತ್ತು. ಪ್ರತಿಯೊಂದು ವಾರವೂ ಹೊಸದೊಂದು ಸುಧಾರಣಾ ಕ್ರಮವು ಘೋಷಣೆಯಾಗುತ್ತಿದ್ದಾಗ ನಮ್ಮಲ್ಲಿ ಹಲವರು ಕುತೂಹಲದಿಂದ ಕಾಯುತ್ತಿದ್ದುದು ನಮಗಿನ್ನೂ ನೆನಪಿದೆ.
ಇನ್ನೂ ಕಾಲ ಮಿಂಚಿಲ್ಲ. ತಮ್ಮ ಜೀವಮಾನದಲ್ಲಿ ಎರಡನೇ ಬಾರಿ ಇತಿಹಾಸ ಸೃಷ್ಟಿಸಲು ಮನಮೋಹನ್ ಸಿಂಗ್‌ಗೆ ಇನ್ನೂ ಅವಕಾಶಗಳಿವೆ. ಮೊದಲ ಬಾರಿ ಅವರು ಆರ್ಥಿಕ ಸುಧಾರಣಾವಾದಿಯಾಗಿ ಇತಿಹಾಸ ಮಾಡಿದ್ದರು. ಈಗವರು ನಮ್ಮ ಸರಕಾರಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದನ್ನು ಬದಲಾಯಿಸಿ, ನಮಗೆ ಉತ್ತಮ ಆಡಳಿತ ಒದಗಿಸಬಹುದು.