ನವದೆಹಲಿ : ಖಾಸಗಿ ಕ್ಷೇತ್ರದಲ್ಲಿ ನೇರ ವಿದೇಶ ಬಂಡವಾಳ ಹೂಡಿಕೆಯನ್ನು ಶೇ.26 ರಿಂದ ಶೇ.49 ಕ್ಕೆ ಏರಿಕೆಯಾಗಲು ಅನುವಾಗುವ ಬಹುನಿರೀಕ್ಷಿತ ಇನ್ಸೂರೆನ್ಸ್ ಮಸೂದೆಯನ್ನು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇನ್ಸೂರೆನ್ಸ್ ಮಸೂದೆ ಕಾನೂನು ಸಚಿವಾಲಯದಿಂದ ಒಪ್ಪಿಗೆ ಪಡೆದಿದೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ಅಧೀವೇಶನದಲ್ಲಿ ಅನುಮತಿ ದೊರೆಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಕ್ಟೋಬರ್ 17 ರಂದು ಸಂಸತ್ತಿನ ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ ಮುನ್ನ ಇನ್ಸೂರೆನ್ಸ್ ಮಸೂದೆ ಸಚಿವ ಸಂಪುಟ ಸಭೆಯ ಮುಂದೆ ಬರಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ತಿಂಗಳಿನಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನೇರ ವಿದೇಶಿ ಬಂಡವಾಳ ಹೂಡಿಕೆ ಮಿತಿಯನ್ನು ಶೇ.26 ರಿಂದ ಶೇ. 49ಕ್ಕೆ ಏರಿಕೆ ಮಾಡುವ ನಿರ್ಣಯಕ್ಕೆ ಅನುಮೋದನೆ ನೀಡಿದ್ದರು ಎಂದು ಸಂಸದೀಯ ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಳ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದ್ದರೂ ಎಡಪಕ್ಷಗಳ ವಿರೋಧದಿಂದಾಗಿ ಮಸೂದೆ ಜಾರಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.