ದೇಶದ ರೈತರು ಅನುಭವಿಸುತ್ತಿರುವ ಸಾಲ ಹೊರೆ ನಿಭಾಯಿಸಲು ಶೀಘ್ರದಲ್ಲೇ ಹೊಸ ಪ್ಯಾಕೇಜ್ ಒಂದನ್ನು ಹೊರಡಿಸಲಾಗುವುದು ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದರು.
ನಾವೀಗಲೇ ರೈತರ ಸಾಲದ ಅಗತ್ಯಗಳನ್ನು ಕಂಡುಕೊಂಡಿದ್ದು, 80 ಶೇಕಡಾ ರೈತರು ಅನೌಪಚಾರಿಕ ವಿತ್ತೀಯ ಸಂಸ್ಥೆಗಳ ಮೂಲಕ ಹಣಕಾಸಿನ ಸಹಾಯ ಪಡೆಯುತ್ತಿದ್ದಾರೆ. ಇದರಿಂದಾಗಿ ರೈತರು ಅತಿಯಾದ ಸಾಲದ ಹೊರೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡಲೇ ಹೊಸ ಪ್ಯಾಕೇಜ್ ಬಿಡುಗಡೆ ಮಾಡಲಾಗುವುದು ಎಂದು ಅವರು ಕೈಗಾರಿಕಾ ಮಂಡಳಿ ಎಫ್‌ಸಿಸಿಐಯ ಸಮ್ಮೆಳನದಲ್ಲಿ ತಿಳಿಸಿದರು.
ದೇಶಿಯ ಉತ್ಪನ್ನದಲ್ಲಿ ಕೃಷಿಯ ಪಾಲು ಕಡಿಮೆಯಾಗುತ್ತಿದ್ದು, ಅದನ್ನು ನಾನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಕೃಷಿ ನಮ್ಮ ಆರ್ಥಿಕತೆಯ ಮತ್ತು ರಾಜಕೀಯದ ಭಾಗವೇ ಆಗಿದೆ.ಈ ಮೊದಲು ಕೃಷಿ ಮೇಲಿನ ರಾಷ್ಟ್ರೀಯ ಅಭಿವೃದ್ಧಿ ಸಮೀತಿಯು 11ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಎರಡು ಕೃಷಿ ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ 35 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.
ಸರಕಾರವು ನಿರಾವರಿ ಯೋಜನೆಗಾಗಿನ ಪ್ರಮಾಣವನ್ನು ಹೆಚ್ಚಿಸಿದ್ದು, ಕೃಷಿ ಮತ್ತು ನಿರಾವರಿ ಯೋಜನೆಗಳಿಗೆ ಕಡೆ ಗಮನ ಹರಿಸಿದ್ದೇವೆ. ಇದೇ ರೀತಿ ಅಕ್ಕಿ ಮತ್ತು ಗೋಧಿ ಮೇಲಿನ ಬೆಂಬಲ ಬೆಲೆಯನ್ನೂ ಹೆಚ್ಚಿಸಿದ್ದೇವೆ. ಈ ರೀತಿಯ ಕಾರ್ಯತತ್ಪರತೆಯು, ಮುಂದಿನ ವರ್ಷದಲ್ಲಿ ಕೃಷಿಯ ಉತ್ಪಾದನೆಯನ್ನು 4 ಶೇ.ರಷ್ಟು ಹೆಚ್ಚು ಮಾಡಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.