2010ಕ್ಕಾಗುವಾಗ ಭಾರತದ ಸಣ್ಣ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಇಚ್ಚಿಸಿರುವ ಅಮೆರಿಕದ ಕಾರು ತಯಾರಕ ಫೋರ್ಡ್ ಮೋಟಾರ್ ಕಂಪೆನಿ, ಕಾರು ಮತ್ತು ಇಂಜಿನುಗಳಿಗಾಗಿ ಭಾರತವನ್ನು ಒಂದು ಪ್ರಾದೇಶಿಕ ರಪ್ತು ಕೇಂದ್ರವನ್ನಾಗಿ ಮಾಡಲು ಚಿಂತಿಸಿದೆ.
ತಮ್ಮ ಪ್ರಾಥಮಿಕ ಗಮನ ಭಾರತದ ದೇಶೀಯ ಮಾರುಕಟ್ಟೆಯತ್ತ ಮುಂದುವರಿಯಲಿದೆ, ಇದೇ ವೇಳೆ ಭಾರತದಲ್ಲಿ ಉತ್ಪಾದನೆಗೊಳ್ಳುವ ಇಂಜಿನ್ ಮತ್ತು ಸಣ್ಣ ಕಾರುಗಳನ್ನು ಫೋರ್ಡ್‌ನ ಇತರ ಮಾರುಕಟ್ಟೆಗಳಿಗೆ ರಪ್ತು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದು ಫೋರ್ಡ್ ಇಂಡಿಯಾದ ಮುಂದಿನ ಅಧ್ಯಕ್ಷ ಮೈಕೆಲ್ ಬೋನ್ಹೇಮ್ ತಿಳಿಸಿದ್ದಾರೆ.
ಈ ವರ್ಷದ ಆದಿಯಲ್ಲಿ ಫೋರ್ಡ್ ಸಂಸ್ಥೆ ಭಾರತದಲ್ಲಿ 500 ದಶಲಕ್ಷ ಡಾಲರ್‌ನ ವಿಸ್ತರಣಾ ಕಾರ್ಯಕ್ರಮದ ಘೋಷಣೆ ಮಾಡಿತ್ತು. ಇದು 2 ಲಕ್ಷ ಯುನಿಟ್ ಸಾಮರ್ಥ್ಯದ ಗ್ರೀನ್‌ಫೀಲ್ಡ್ ಸಣ್ಣ ಕಾರು ಸ್ಥಾವರ ನಿರ್ಮಾಣ ಮತ್ತು ಪ್ರಸಕ್ತ 60,000 ಯುನಿಟ್‌ನಿಂದ 2.5 ಲಕ್ಷ ಯುನಿಟ್‌ವರೆಗಿನ ಇಂಜಿನ್ ಉತ್ಪಾದನಾ ಸಾಮರ್ಥ್ಯ ವಿಸ್ತರಣೆಯನ್ನು ಒಳಗೊಂಡಿದೆ.
ಭಾರತದಲ್ಲಿ ತನ್ನ ಇಂಜಿನ್ ಉತ್ಪಾದನೆ ಸಾಮರ್ಥ್ಯವನ್ನು ವಿಸ್ತರಿಸುವುದರೊಂದಿಗೆ, ಫೋರ್ಡ್ 2010ರ ವೇಳೆಗೆ ಸ್ಥಳೀಕರಣ ಮಟ್ಟವನ್ನು 85ಶೇ.ಗೆ ಹೆಚ್ಚಿಸಲಿದೆ ಎಂದು ಅವರು ತಿಳಿಸಿದರು.