Publish Date: Tue, 07 Oct 2008 (18:30 IST)
Updated Date: Tue, 07 Oct 2008 (18:29 IST)
ಪಶ್ಚಿಮಬಂಗಾಳದ ಸಿಂಗೂರ್‌ನಿಂದ ನ್ಯಾನೋ ಯೋಜನೆಯನ್ನು ಹಿಂತೆಗೆಯುವ ನಿರ್ಧಾರವನ್ನು ಟಾಟಾ ಮೋಟಾರ್ಸ್ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ, ಇದೀಗ ಟಾಟಾ ಗುಜರಾತ್‌ನ ಚರೋಡಿಯ ಸನಂದ್‌ನಲ್ಲಿ ತನ್ನ ಘಟಕವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಮಂಗಳವಾರ ಸಂಜೆ ರತನ್ ಟಾಟಾ ಘೋಷಿಸಿದ್ದಾರೆ.
ಟಾಟಾರ ಬಹು ನಿರೀಕ್ಷೆಯ ನ್ಯಾನೋ ಯೋಜನೆಗಾಗಿ ಮಹಾರಾಷ್ಟ್ರ,ಆಂಧ್ರಪ್ರದೇಶ,ಉತ್ತರಖಂಡ ಸೇರಿದಂತೆ ಕರ್ನಾಟಕ ರಾಜ್ಯಗಳು ರತ್ನಗಂಬಳಿ ಹಾಸಿ ಸ್ವಾಗತಿಸುವುದಾಗಿ ಆಹ್ವಾನ ನೀಡಿದ್ದವು. ಆದರೆ ಕೊನೆಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ನ್ಯಾನೋ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಟಾ ನ್ಯಾನೋ ಕಾರು ಘಟಕ ಸ್ಥಾಪನೆಗಾಗಿ ಗುಜರಾತ್ ಸರ್ಕಾರ ಮಂಗಳವಾರ ಸಚಿವ ಸಂಪುಟ ಸಭೆಯಲ್ಲಿ 1050 ಎಕರೆ ಭೂಮಿಯನ್ನು ನೀಡಲು ಒಪ್ಪಿಗೆ ಸೂಚಿಸಿವೆ. ಅಲ್ಲದೇ ಸರ್ಕಾರ ಅಧಿಕೃತವಾಗಿ ಭೂಮಿಯನ್ನು ಟಾಟಾಗೆ ಹಸ್ತಾಂತರಿಸಿರುವುದಾಗಿ ತಿಳಿಸಿದೆ.
ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ರತನ್ ಟಾಟಾ ಅವರು ಮಂಗಳವಾರ ಸಂಜೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದಿನ ತಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ನುಡಿದರಲ್ಲದೆ, ಪಶ್ಚಿಮಬಂಗಾಳದಲ್ಲಿ ನಡೆದ ಘಟನೆ ತಮಗೆ ನೋವಿನ ವಿಚಾರವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.