ಭಾರತದ ಆರ್ಥಿಕತೆಯ ನಿಧಾನಗತಿಯ ಚೇತರಿಕೆಯ ಮಧ್ಯೆಯು ಮುಂಬರುವ ಎರಡು ಅಥವಾ ಮೂರು ವರ್ಷಗಳಲ್ಲಿ ಚೀನಾ ದೇಶದ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಹೇಳಿದ್ದಾರೆ.
ಕಡಿಮೆ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣ ಮತ್ತು ದೀರ್ಘಾವಧಿಯ ಅಭಿವೃದ್ಧಿ ಗುರಿಗಳನ್ನು ನಿಗದಿತ ಅವದಿಯಲ್ಲಿ ತಲುಪಿದಲ್ಲಿ, ಭಾರತ ಆರ್ಥಿಕತೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ಸಾಧ್ಯತೆಗಳಿವೆ ಎಂದು ಬಸು ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ದೇಶದ ಆರ್ಥಿಕತೆ ಶೇ.8.5ಕ್ಕೆ ತಲುಪಿತ್ತು. ಆದರೆ, ಜನೆವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಅಭಿವೃದ್ಧಿ ದರ ಶೇ.7.8ಕ್ಕೆ ಕುಸಿತ ಕಂಡಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ದೇಶದ ಆರ್ಥಿಕತೆ ಚೇತರಿಕೆಗಾಗಿ ಹಲವಾರು ಆರ್ಥಿಕ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದ್ದು, ಇಂಧನ ಉತ್ಪನ್ನಗಳ ಮೇಲಿನ ಅನುದಾನ ಕಡಿತಗೊಳಿಸಿ, ನಿಜವಾದ ದರದಲ್ಲಿ ಬಡವರಿಗೆ ವಿತರಿಸಲು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಬಸು ವಿವರಣೆ ನೀಡಿದ್ದಾರೆ.
ದೇಶದ ರಿಟೇಲ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಿಂದಾಗಿ, ಹಣದುಬ್ಬರ ನಿಯಂತ್ರಿಸಲು ಸಹಕಾರಿಯಾಗುತ್ತದೆ ಹಾಗೂ ಆಹಾರ ಸರಬರಾಜು ಮೇಲ್ವಿಚಾರಣೆಗೆ ಅವಕಾಶ ದೊರೆಯುತ್ತದೆ ಎಂದು ಕೌಶಿಕ್ ಬಸು ತಿಳಿಸಿದ್ದಾರೆ.