Select Your Language

Notifications

webdunia
webdunia
webdunia
webdunia

ರೂ.10 ಸಾವಿರ ಕೋಟಿಯಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ

ರೂ.10 ಸಾವಿರ ಕೋಟಿಯಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ
Bangalore , ಶುಕ್ರವಾರ, 13 ಜನವರಿ 2017 (14:13 IST)
ಕಳೆದ ಮೂರು ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಿ ಹತ್ತು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಅವರು ತಿಳಿಸಿದ್ದಾರೆ. ವಸತಿ ಸಚಿವರು ರಾಜ್ಯದ ಎಲ್ಲಾ ಜಿಲ್ಲಾಡಳಿತ ಮುಖ್ಯಸ್ಥರೊಂದಿಗೆ ವಸತಿ ಯೋಜನೆಗಳ ಕುರಿತ ವಿಡಿಯೊ ಕಾನ್ಪರೆನ್ಸ್ ನಲ್ಲಿ ಮಾತನಾಡಿದರು. 
 
ಪ್ರಸಕ್ತ ವರ್ಷದಲ್ಲಿ 3.5 ಲಕ್ಷ ಮನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ನುಡಿದ ಸಚಿವರು ಈಗಾಗಲೇ 1.75 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದರು. ಮರಳಿನ ಕೊರತೆ ಹಾಗೂ ಕೆಲವು ಇತರೆ ಕಾರಣಗಳಿಗಾಗಿ ಮನೆ ನಿರ್ಮಾಣ ಕಾರ್ಯ ಸ್ವಲ್ಪ ನಿಧಾನಗತಿಯಿಂದ ಸಾಗಿದೆ ಎಂದ ವಸತಿ ಸಚಿವರು ಈಗಾಗಲೇ 6 ಲಕ್ಷ ಮನೆಗಳ ನಿರ್ಮಾಣಕ್ಕಾಗಿ ಆದೇಶ ನೀಡಲಾಗಿದೆ. ಅಲ್ಲದೆ ಇನ್ನೂ ಹತ್ತು ಲಕ್ಷ ಮನೆ ನಿರ್ಮಿಸುವ ಗುರಿಹಾಕಿಕೊಳ್ಳಲಾಗಿದೆ ಎಂದು ವಸತಿ ಸಚಿವರು ತಿಳಿಸಿದರು.
 
ಪ್ರತಿ ವರ್ಷ ನಿವೇಶನರಹಿತರಿಗೆ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ತಲಾ ಹತ್ತು ಸಾವಿರ ಮನೆಗಳನ್ನು ನೀಡಲಾಗುವುದು. ಈಗಾಗಲೇ ವಸತಿ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ 1500 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಕಳೆದ ವರ್ಷ 3.36 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
 
ಮನೆ ನಿರ್ಮಾಣ ಮತ್ತು ನಿವೇಶನ ಹಂಚಿಕೆಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ಬೆಂಗಳೂರು ನಗರ ಜಿಲ್ಲೆ ಕಡೆ ಸ್ಥಾನದಲ್ಲಿದೆ ರಾಜ್ಯದಲ್ಲಿ ಪ್ರತಿ ದಿನ ಸುಮಾರು ಎರಡು ಸಾವಿರ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಸತಿ ಹಂಚಿಕೆ ಮತ್ತು ಮನೆ ನಿರ್ಮಾಣ ಕಾರ್ಯಕ್ಕೆ ಇನ್ನಷ್ಟು ಆದ್ಯತೆ ನೀಡಿ ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ತಲುಪಲಾಗುವುದು ಎಂದು ವಸತಿ ಸಚಿವರು ಹೇಳಿದರು.
 
ನಗರಗಳಲ್ಲಿ ಬಹುಮಹಡಿ ಸಂಕೀರ್ಣ: ನಗರ ಪ್ರದೇಶಗಳಲ್ಲಿ ಭೂಮಿ ಸಿಗುವುದು ಕಷ್ಟಕರವಾಗಿದ್ದು ಬಹುಮಹಡಿ ಸಂಕೀರ್ಣಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಚಿಂತಿಸಲಾಗಿದೆ ಎಂದ ವಸತಿ ಸಚಿವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಸತಿ ಫಲಾನುಭವಿಗಳಿಗೆ 1.50 ಲಕ್ಷ ರೂ. ಖರ್ಚು ಮಾಡಿ ಮನೆ ನಿರ್ಮಿಸಿದರೆ ಸಾಮಾನ್ಯ ವರ್ಗದವರಿಗೆ 1.25 ಲಕ್ಷ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು. ವಿಕಾಸ ಸೌಧದಲ್ಲಿ ವಿಡಿಯೊ ಕಾನ್ಫರೆನ್ಸ್ ಆಯೋಜನೆಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್, ಕಾಲೇಜುಗಳಿಗೆ ವೈಫೈ