ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಆರಂಭಿಕ ಐದು ತಿಂಗಳುಗಳಲ್ಲಿ ದೇಶಿಯ ವಿಮಾನ ಹಾರಾಟದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.22.87 ರಷ್ಟು ವೃದ್ಧಿಯಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಕಳೆದ ಆರ್ಥಿಕ ವರ್ಷದಲ್ಲಿ 322,32 ಪ್ರಯಾಣಿಕರು ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದು, ಪ್ರಸಕ್ತ ಸಾಲಿನಲ್ಲಿ 396,04 ಕ್ಕೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ 86.69 ಪ್ರಯಾಣಿಕರು ದೇಶಿ ವಿಮಾನ ಪ್ರಯಾಣ ಬೆಳೆಸಿದ್ದಾರೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 71.27 ಪ್ರಯಾಣಿಕರು ದೇಶಿ ವಿಮಾನ ಪ್ರಯಾಣ ಬೆಳೆಸಿದ್ದರಿಂದ ಶೇ.21.63 ರಷ್ಟು ಹೆಚ್ಚಳವಾದಂತಾಗಿದೆ.
ಕಳೆದ ಮೇ ತಿಂಗಳಲ್ಲಿ ಅತಿ ಹೆಚ್ಚಿನ ಪ್ರಯಾಣಿಕರು ವಿಮಾನದಲ್ಲಿ ಹಾರಾಟ ನಡೆಸಿರುವುದು ಕಂಡು ಬಂದಿದೆ. ಕಡಿಮೆ ದರದ ವಿಮಾನ ಪ್ರಯಾಣ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕರ್ಷಿತರಾಗುತ್ತಿದ್ದಾರೆ ಎಂದು ಕೈಗಾರಿಕಾ ವೀಕ್ಷಕರು ಅಭಿಪ್ರಾಪ ವ್ಯಕ್ತಪಡಿಸಿದ್ದಾರೆ.
ಸ್ಪೈಸ್ ಜೆಟ್ ಸಂಸ್ಥೆ ಏಪ್ರಿಲ್ ತಿಂಗಳಲ್ಲಿ ಶೇ.93.2 ರಷ್ಟು ಮುಂಗಡ ಬುಕ್ಕಿಂಗ್ ಹೊಂದಿದ್ದಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ 93.5 ಪ್ರತಿಶತ ಆಸನಗಳನ್ನು ಹೆಚ್ಚಿಸಿದೆ. ಏರಿಂಡಿಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.78.9 ರಿಂದ ಶೇ.84.7 ರಷ್ಟು ಚೇತರಿಕೆಯಾಗಿದೆ.
ಕಡಿಮೆ ದರದದಲ್ಲಿ ವಿಮಾನ ಸೇವೆ ನೀಡುತ್ತಿರುವ ಇಂಡಿಗೋ ಸಂಸ್ಥೆ ಮಾರುಕಟ್ಟೆಯಲ್ಲಿ 38.5 ಪ್ರತಿಶತ ಶೇರ್‌ಗಳನ್ನು ಹೊಂದಿದೆ. ಈ ಸಂಸ್ಥೆ ಮೇ ತಿಂಗಳಲ್ಲಿ 33.37 ಲಕ್ಷ ಪ್ರಯಾಣಿಕರಿಗೆ ವಿಮಾನ ಸೇವೆ ಒದಗಿಸಿದೆ. ಜೆಟ್ ಏರ್‌ವೇಸ್ 13.94 ಲಕ್ಷ ಪ್ರಯಾಣಿಕರು ಮತ್ತು ರಾಷ್ಟ್ರೀಯ ವಾಹಕ ಏರ್ ಇಂಡಿಯಾ 13.34 ಲಕ್ಷ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ