Publish Date: Fri, 16 Oct 2026 (12:34 IST)
Updated Date: Fri, 16 Oct 2026 (13:53 IST)
ಭಾರತೀಯ ಕಾರ್ಪೊರೇಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್, ತನ್ನ ಬಹುನಿರೀಕ್ಷಿತ ಸಾರ್ವಜನಿಕ ಷೇರು ಬಿಡುಗಡೆಗೆ (IPO) ಸಂಬಂಧಿಸಿದಂತೆ ಆರ್ಎಚ್ಪಿ ಸಲ್ಲಿಸಿರುವುದಾಗಿ ಸ್ಟಾಕ್ ಎಕ್ಸ್ಚೇಂಜ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್ನ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾ ಅಧಿಕಾರಿ ಸ್ಯಾವಿತ್ರಿ ಪರೇಖ್ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಪತ್ರದಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಅಹಮದಾಬಾದ್ನಲ್ಲಿರುವ ಗುಜರಾತ್ನ ಕಂಪನಿಗಳ ನೋಂದಣಾಧಿಕಾರಿಗಳಿಗೆ ಆರ್ಎಚ್ಪಿ ಸಲ್ಲಿಸಲಾಗಿದ್ದು, ಈ ಮೂಲಕ ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಐಪಿಒ ಬಿಡುಗಡೆಗೆ ದಿನಾಂಕಗಳು ಮತ್ತು ಷೇರು ಬೆಲೆ ಶ್ರೇಣಿ ಅಧಿಕೃತವಾಗಿ ಖಾತರಿಯಾಗಿವೆ.
ಐಪಿಒ ವೇಳಾಪಟ್ಟಿ ಮತ್ತು ಮುಖ್ಯ ದಿನಾಂಕಗಳು
ಸ್ಯಾವಿತ್ರಿ ಪರೇಖ್ ಅವರು ನೀಡಿದ ಮಾಹಿತಿಯಂತೆ, ಈ ಐಪಿಒ ಮೂಲಕ ಪ್ರತಿ ಷೇರಿಗೆ ₹10 ಮುಖಬೆಲೆಯ 27,00,00,000 (27 ಕೋಟಿ) ಹೊಸ ಈಕ್ವಿಟಿ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಆಂಕರ್ ಹೂಡಿಕೆದಾರರ ಬಿಡ್ಡಿಂಗ್ ದಿನಾಂಕ: ಸೋಮವಾರ, ಅಕ್ಟೋಬರ್ 19, 2026.
ಸಾರ್ವಜನಿಕ ಚಂದಾದಾರಿಕೆ ಆರಂಭದ ದಿನಾಂಕ: ಬುಧವಾರ, ಅಕ್ಟೋಬರ್ 21, 2026.
ಬಿಡ್ಡಿಂಗ್ ಮುಕ್ತಾಯದ ದಿನಾಂಕ: ಶುಕ್ರವಾರ, ಅಕ್ಟೋಬರ್ 23, 2026.
ಷೇರು ಬೆಲೆ ಶ್ರೇಣಿ ಮತ್ತು ಲಾಟ್ ಗಾತ್ರ
ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನ ಆಡಳಿತ ಮಂಡಳಿಯ ಐಪಿಒ ಸಮಿತಿಯು ಬೆಲೆ ಶ್ರೇಣಿ, ಉದ್ಯೋಗಿಗಳ ರಿಯಾಯಿತಿ ಮತ್ತು ಕನಿಷ್ಠ ಬಿಡ್ ಲಾಟ್ ವಿವರಗಳಿಗೆ ಅನುಮೋದನೆ ನೀಡಿದೆ:
ಬೆಲೆ ಶ್ರೇಣಿ: ಪ್ರತಿ ಷೇರಿಗೆ ಕನಿಷ್ಠ ₹1,065 ರಿಂದ ಗರಿಷ್ಠ ₹1,119 ರವರೆಗೆ ನಿಗದಿಪಡಿಸಲಾಗಿದೆ.
ಕನಿಷ್ಠ ಬಿಡ್ ಲಾಟ್: ಹೂಡಿಕೆದಾರರು ಕನಿಷ್ಠ 12 ಈಕ್ವಿಟಿ ಷೇರುಗಳಿಗೆ ಬಿಡ್ ಮಾಡಬೇಕಾಗುತ್ತದೆ. ತದನಂತರ 12 ರ ಗುಣಕಗಳಲ್ಲಿ (12, 24, 36...) ಅರ್ಜಿ ಸಲ್ಲಿಸಬಹುದು.
ಉದ್ಯೋಗಿಗಳ ರಿಯಾಯಿತಿ: ಅರ್ಹ ಉದ್ಯೋಗಿಗಳಿಗೆ ಕಾಯ್ದಿರಿಸಿದ ಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಸಿಬ್ಬಂದಿಗೆ ಪ್ರತಿ ಷೇರಿಗೆ ₹54 ರಿಯಾಯಿತಿ ಘೋಷಿಸಲಾಗಿದೆ.
ಆರ್ಐಎಲ್ ಶೇರುದಾರರು ಮತ್ತು ಉದ್ಯೋಗಿಗಳಿಗೆ ವಿಶೇಷ ಮೀಸಲಾತಿ
ಈ ಬೃಹತ್ ಐಪಿಒದಲ್ಲಿ ಅರ್ಹ ಉದ್ಯೋಗಿಗಳು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (RIL) ಹಾಲಿ ಷೇರುದಾರರಿಗೆ ವಿಶೇಷ ಮೀಸಲಾತಿಯನ್ನು ಒದಗಿಸಲಾಗಿದೆ:
ಉದ್ಯೋಗಿಗಳಿಗೆ ಮೀಸಲಾತಿ: ಅರ್ಹ ಉದ್ಯೋಗಿಗಳ ಚಂದಾದಾರಿಕೆಗಾಗಿ ಗರಿಷ್ಠ ₹500 ಕೋಟಿ ಮೌಲ್ಯದ ಷೇರುಗಳನ್ನು ಕಾಯ್ದಿರಿಸಲಾಗಿದೆ.
ಆರ್ಐಎಲ್ ಷೇರುದಾರರಿಗೆ ಮೀಸಲಾತಿ: ಆರ್ಎಚ್ಪಿ ಸಲ್ಲಿಕೆಯಾದ ದಿನಾಂಕದಂದು (ಅಕ್ಟೋಬರ್ 14, 2026) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸಾರ್ವಜನಿಕ ಈಕ್ವಿಟಿ ಷೇರುದಾರರಾಗಿರುವ ವ್ಯಕ್ತಿಗಳು ಹಾಗೂ ಹೆಚ್ಯುಎಫ್ಗಳಿಗೆ ಗರಿಷ್ಠ ₹2,500 ಕೋಟಿ ಮೌಲ್ಯದ ಷೇರುಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ.
ಜೂನ್ 19, 2026 ರಂದು ಡಿಆರ್ಹೆಚ್ಪಿ ಸಲ್ಲಿಕೆ ಮಾಡಿದ್ದ ಜಿಯೋ ಪ್ಲಾಟ್ಫಾರ್ಮ್ಸ್ಗೆ ಆಗಸ್ಟ್ 28, 2026 ರಂದು ಸೆಬಿಯಿಂದ ಅನುಮೋದನೆ ದೊರೆತಿತ್ತು. ಇದೀಗ ಅಂತಿಮ ಹಂತದ ಆರ್ಎಚ್ಪಿ ಸಲ್ಲಿಕೆಯಾಗಿದ್ದು, ಅಕ್ಟೋಬರ್ 21 ರಿಂದ 23 ರವರೆಗೆ ಹೂಡಿಕೆದಾರರಿಗೆ ಈ ಬೃಹತ್ ಕೊಡುಗೆಯಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ