ಸರಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್, ಏಪ್ರಿಲ್ ತಿಂಗಳಲ್ಲಿ ಹೆಚ್ಚು ಗ್ರಾಹಕರನ್ನು ಹೊಂದುವ ಮೂಲಕ ಸತತ ಮೂರನೇಯ ತಿಂಗಳು ಖಾಸಗಿ ವಲಯದ ದೂರ ಸಂಪರ್ಕ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಾರ್ಚ್ ತಿಂಗಳಲ್ಲಿ 105.88 ಕೋಟಿ ಟೆಲಿಕಾಂ ಚಂದಾದಾರರ ಸಂಖ್ಯೆ, ಏಪ್ರಿಲ್ ತಿಂಗಳಲ್ಲಿ 105.92 ಕೋಟಿಗೆ ಹೆಚ್ಚಳವಾಗಿದೆ. ಮಾರ್ಚ್ ತಿಂಗಳಲ್ಲಿ ಹೊಂದಿದ್ದ 103.36 ಕೋಟಿ ಮೊಬೈಲ್ ಚಂದಾದಾರರ ಸಂಖ್ಯೆ, ಏಪ್ರಿಲ್ ತಿಂಗಳಲ್ಲಿ 103.42 ಕೋಟಿಗೆ ಹೆಚ್ಚಳವಾಗಿದೆ ಎಂದು ಬಿಎಸ್‌ಎನ್‌ಎಲ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ 11.39 ಲಕ್ಷ ಗ್ರಾಹಕರನ್ನು ಹೊಂದುವ ಮೂಲಕ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಅಗ್ರ ಸ್ಥಾನಕ್ಕೇರಿದ್ದು, ಭಾರತೀಯ ಏರ್‌ಟೆಲ್ 9.78 ಲಕ್ಷ, ಏರ್‌ಸೆಲ್ 5.72 ಲಕ್ಷ, ರಿಲಯನ್ಸ್ ಕಮ್ಯುನಿಕೇಷನ್ 1.1 ಲಕ್ಷ, ವೊಡಾಫೋನ್ 46,600, ಕ್ವಾಡ್ರಾಂಟ್ ಟೆಲಿಕಾಮ್ ಸಂಸ್ಥೆ 25012 ಮತ್ತು ಎಮ್‌ಟಿಎನ್‌ಎಲ್ 11591 ಸಾವಿರ ಹೊಸ ಗ್ರಾಹಕರನ್ನು ಹೊಂದಿದೆ.
ವಿಡಿಯೋಕಾನ್ ಸಂಸ್ಥೆ ತನ್ನ ಮೊಬೈಲ್ ವ್ಯವಹಾರವನ್ನು ಏರ್‌ಟೆಲ್ ಸಂಸ್ಥೆಗೆ ಮಾರಾಟ ಮಾಡಿದ್ದ ಪರಿಣಾಮವಾಗಿ 14 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ ಎನ್ನಲಾಗಿದೆ. ಗ್ರಾಹಕರನ್ನು ಕಳೆದುಕೊಂಡ ಇತರ ಮೊಬೈಲ್ ಕಂಪೆನಿಗಳೆಂದರೆ ಟಾಟಾ ಟೆಲಿಸರ್ವಿಸಸ್ (3.97 ಲಕ್ಷ), ಐಡಿಯಾ ಸೆಲ್ಯೂಲಾರ್ (3.87 ಲಕ್ಷ), ಸಿಸ್ಟೆಮಾ (42,290) ಮತ್ತು ಟೆಲೆನಾರ್ 25,496 ಗ್ರಾಹಕರನ್ನು ಕಳೆದುಕೊಂಡಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.