Publish Date: Tue, 22 Jul 2025 (12:36 IST)
Updated Date: Tue, 22 Jul 2025 (12:39 IST)
ಬೆಂಗಳೂರು: ಅಡಿಕೆ ಬೆಳೆಗಾರರಿಗೆ ಮತ್ತೆ ನಿರಾಸೆಯೇ ಗತಿಯಾಗಿದೆ. ಇಂದೂ ಬೆಲೆ ಯಥಾಸ್ಥಿತಿಯಲ್ಲೇ ಇದೆ. ಆದರೆ ಕೊಬ್ಬರಿ, ಕಾಳುಮೆಣಸು ದರವೂ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ ಎಂಬಂತಾಗಿದೆ. ಬೆಲೆ ಏರಿಕೆಯ ಲಕ್ಷಣವಂತೂ ಕಂಡುಬರುತ್ತಿಲ್ಲ. ಇದು ರೈತರ ಚಿಂತೆಗೆ ಕಾರಣವಾಗಿದೆ. ಈ ವಾರವಾದರೂ ಅಡಿಕೆ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಹೊಸ ಅಡಿಕೆ ಬೆಲೆ ಕೆಲವು ದಿನಗಳಿಂದ 475 ರೂ.ಗಳಷ್ಟಿದೆ. ಕೆಲವು ಕಡೆ ಮಾತ್ರ 485 ರೂ.ವರೆಗೂ ಬೆಲೆ ಸಿಗುತ್ತಿದೆ. ಹಳೆ ಅಡಿಕೆ ಬೆಲೆ ಹಲವು ದಿನಗಳಿಂದ ಯಥಾ ಸ್ಥಿತಿಯಲ್ಲಿದೆ. ಹಳೆ ಅಡಿಕೆ ಬೆಲೆ ಇಂದೂ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಇವೆರಡರ ದರ 365-370 ರೂ. ಗಳಷ್ಟೇ ಇದೆ. ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ವ್ಯತ್ಯಾಸವಾಗಿಲ್ಲ. ಇವೆರಡರ ದರ ಈಗ 270- 275 ರೂ.ಗೆ ಬಂದು ತಲುಪಿದೆ.
ಕಾಳುಮೆಣಸು, ಕೊಬ್ಬರಿ ದರ
ಮೊನ್ನೆಯಿಂದ ಕಾಳುಮೆಣಸು ಬೆಲೆ ಯಥಾಸ್ಥಿತಿಯಲ್ಲಿತ್ತು. ಆದರೆ ನಿನ್ನೆ ಕಾಳುಮೆಣಸು ದರ ಕೊಂಚ ಇಳಿಕೆಯಾಗಿತ್ತು. ಇಂದು ಮತ್ತೆ ಯಥಾಸ್ಥಿತಿಯಲ್ಲಿದ್ದು 640 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಗರಿಷ್ಠ 260 ರೂ.ಗಳಷ್ಟಿದೆ.