Select Your Language

Notifications

webdunia
webdunia
webdunia
webdunia

ಭವ್ಯಭಾರತ: ಭಾರತದ ಗಜಗಾಂಭೀರ್ಯದ ಮುನ್ನಡೆ

ಭವ್ಯಭಾರತ: ಭಾರತದ ಗಜಗಾಂಭೀರ್ಯದ ಮುನ್ನಡೆ

ಗುರುಚರಣ್ ದಾಸ್

ಹೊಸ ವರ್ಷ ಈಗಷ್ಟೇ ಆರಂಭವಾಗಿದೆ. ಸುಮ್ಮನೇ ಕುಳಿತುಕೊಂಡು ಒಳಿತಿನ ಬಗ್ಗೆ, ಭವ್ಯ ಭವಿಷ್ಯದ ಬಗ್ಗೆ ಯೋಚಿಸಲು ಇದು ಸಕಾಲ. ಇತ್ತೀಚಿನ ದಿನಗಳಲ್ಲಿ ಒಳ್ಳೆಯದರ ಬಗ್ಗೆ ಯೋಚಿಸಲು ಸಮಯವಿಲ್ಲ ಎಂಬಷ್ಟರ ಮಟ್ಟಿಗೆ ನಾವು ಕೆಟ್ಟ ಸುದ್ದಿಗಳನ್ನು ಕೇಳಿದ್ದೇವೆ. ಆದರೆ, ಆರ್ಥಿಕ ಸುಧಾರಣೆಗಳ ಬಳಿಕ ಭಾರತವೊಂದು ಶಕ್ತಿಶಾಲಿ, ಮುಕ್ತಮಾರುಕಟ್ಟೆಯ ಪ್ರಜಾಪ್ರಭುತ್ವವಾಗಿ ರೂಪುಗೊಳ್ಳುತ್ತಿದೆ ಮತ್ತು ಜಾಗತಿಕ ಮಾಹಿತಿ ಆರ್ಥಿಕತೆಯಲ್ಲಿ ತನ್ನ ತೋಳ್ಬಲ ಪ್ರದರ್ಶಿಸಲು ಸಜ್ಜಾಗುತ್ತಿದೆ ಎಂಬುದು ನೆಮ್ಮದಿ ತರುವ ಸತ್ಯ. 1947 ಮತ್ತು 1991ರ ನಡುವಿನ ಕೈಗಾರಿಕಾ ಕ್ರಾಂತಿಯನ್ನೇ ನಿರ್ನಾಮ ಮಾಡಿದ್ದ ಈ ಹಿಂದಿನ ಕೇಂದ್ರೀಕೃತ, ಅಧಿಕಾರಶಾಹಿ ದೇಶ ಎಂಬ ಹಣೆಪಟ್ಟಿಯು ನಿಧಾನವಾಗಿ ಕಳಚಿಕೊಳ್ಳುತ್ತಿದೆ.

ಹೆಚ್ಚಿನ ಭಾರತೀಯರು ಭಾರತದ ಬಡತನ ಮತ್ತು ಆಧ್ಯಾತ್ಮಿಕಕ್ಕೆ ಒಗ್ಗಿಕೊಂಡುಬಿಟ್ಟಿದ್ದಾರೆ. ಆದರೆ ನಾವು ಈ ಸದ್ದಿಲ್ಲದ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಪ್ರಧಾನ ಕಾರಣವೆಂದರೆ, ಕಳೆದ 25 ವರ್ಷಗಳಲ್ಲಿ ಭಾರತವು ಅನುಭವಿಸಿದ ಅದ್ಭುತ ಆರ್ಥಿಕ ಬೆಳವಣಿಗೆಯ ನಿರಂತರತೆ.

1980-2003ರವರೆಗೆ ಭಾರತವು ವಾರ್ಷಿಕವಾಗಿ ಶೇ.6 ಪ್ರಗತಿ ಕಂಡಿದ್ದರೆ, 2003-2006ರ ಅವಧಿಯಲ್ಲಿ ಇದರ ಪ್ರಮಾಣ ಶೇ.8. ಈ ಅತ್ಯಧಿಕ ಪ್ರಗತಿ ದರವು ಪ್ರತಿವರ್ಷ ಶೇ.1ರಷ್ಟು ಬಡವರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತುತ್ತಾ, ಕಳೆದ 25 ವರ್ಷಗಳಲ್ಲಿ 20 ಕೋಟಿ ಮಂದಿ ಉದ್ಧಾರ ಕಂಡಿದ್ದಾರೆ. ಇದು ಮಧ್ಯಮ ದರ್ಜೆಯ ಜನರ ಪ್ರಮಾಣವನ್ನು ಕೂಡ ಮೂರು ಪಟ್ಟು ಹೆಚ್ಚಿಸಿ, 30 ಕೋಟಿಗೆ ತಲುಪಿಸಿದೆ. ಇದೇ ಬೆಳವಣಿಗೆ ಮುಂದುವರಿದರೆ, ಒಂದು ಪೀಳಿಗೆಯ ಅವಧಿಯೊಳಗೆ ಭಾರತದ ಅರ್ಧದಷ್ಟು ಮಂದಿ ಬಡತನ ರೇಖೆ ದಾಟಿ ಮಧ್ಯಮ ದರ್ಜೆಯಲ್ಲಿರುತ್ತಾರೆ. ಈ “ಮೌನ ಕ್ರಾಂತಿ”ಯು ರಾಜಕೀಯ ನಾಯಕರು ಮತ್ತು ಪಕ್ಷಗಳ ನಿರಂತರವಾಗಿ ಬದಲಾಗುತ್ತಿರುವ ಅದೃಷ್ಟಕ್ಕಿಂತಲೂ ಅತ್ಯಂತ ಮಹತ್ವವಾದದ್ದು ಮತ್ತು ಭಾರತೀಯರೆಲ್ಲಾ ಬಗ್ಗೆ ಹೆಮ್ಮೆ ಪಡಬಹುದಾದ ಸಂಗತಿ ಇದು.

ಎರಡು ಜಾಗತಿಕ ಪ್ರವೃತ್ತಿಗಳು ಒಂದುಗೂಡಿ ಭಾರತದ ಪರವಾಗಿ ಕೆಲಸ ಮಾಡುತ್ತಿವೆ ಮತ್ತು ನಾವು ಉನ್ನತ ಪ್ರಗತಿ ಸಾಧಿಸುತ್ತೇವೆ ಎಂಬ ವಿಶ್ವಾಸವೃದ್ಧಿಗೆ ಕಾರಣವಾಗಿವೆ. ಅದರಲ್ಲಿ ಮೊದಲನೆಯದು, ಕಳೆದೊಂದು ದಶಕದಲ್ಲಿ ಜಗತ್ತನ್ನೇ ಆವರಿಸಿಕೊಂಡ ಉದಾರೀಕರಣದ ಕ್ರಾಂತಿ. ಅದು ಐವತ್ತು ವರ್ಷಗಳಿಂದ ಅಸ್ಪೃಶ್ಯವಾದಂತಿದ್ದ ನಮ್ಮ ಆರ್ಥಿಕತೆಯನ್ನು ಮುಕ್ತವಾಗಿಸಿತು ಮತ್ತು ಜಾಗತಿಕ ಆರ್ಥಿಕತೆಯೊಂದಿಗೆ ಅದ್ಭುತವಾಗಿ ಮಿಳಿತವಾಗಿಸಿತು. ಭಾರತದ ಆರ್ಥಿಕ ಸುಧಾರಣೆಗಳು ಕೂಡ ಈ ಪ್ರವೃತ್ತಿಯ ಭಾಗವಾದವು. ಹಲವು ವರ್ಷಗಳಿಂದ ಬಲವಂತವಾಗಿ ಒತ್ತಲ್ಪಟ್ಟಿದ್ದ, ಭಾರತೀಯ ಉದ್ಯಮಿಗಳು ಮತ್ತು ಭಾರತೀಯ ಜನತೆಯಲ್ಲಿದ್ದ ಶಕ್ತಿಯ ಮೇಲಿನ ನಿಯಂತ್ರಣ ಕಳಚಿ, ಅವುಗಳೆಲ್ಲವೂ ಬಾಹ್ಯಮುಖಿಯಾದವು. ಈಗ ರಾಷ್ಟ್ರೀಯ ಮನೋಭಾವವೇ ಬದಲಾಗತೊಡಗಿದೆ, ವಿಶೇಷವಾಗಿ ಯುವಜನಾಂಗ ಬದಲಾಗುತ್ತಿದೆ. ಚಕ್ರ ಬಡ್ಡಿಯ ಮಹತ್ವವೇನು ಎಂಬುದು ಗೊತ್ತಾಗುತ್ತಿದೆ, ಬಂಡವಾಳ ಹೇಗೆ ಸಂಗ್ರಹಿಸಬೇಕು ಎಂಬುದರ ಜ್ಞಾನ ದೊರೆಯುತ್ತಿದೆ. ಈ ಪ್ರವೃತ್ತಿಗಿರುವ ಇನ್ನೊಂದು ಹೆಸರೇ “ಜಾಗತೀಕರಣ”.

ಎರಡನೇ ಜಾಗತಿಕ ಪ್ರವೃತ್ತಿಯೆಂದರೆ, ವಿಶ್ವದ ಆರ್ಥಿಕತೆಯ ಬದಲಾವಣೆ. ಕೈಗಾರಿಕಾ ಅಥವಾ ಉತ್ಪಾದನಾ ಕ್ಷೇತ್ರದ ಆರ್ಥಿಕತೆಯಿಂದ ಅದೀಗ ಜ್ಞಾನ ಆಧಾರಿತ ಆರ್ಥಿಕತೆಯಾಗಿ ಬದಲಾಗಿದೆ. ಎಲ್ಲರ ಅಚ್ಚರಿಗೆ ಕಾರಣವಾಗಿದ್ದೆಂದರೆ, ಈ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಭಾರತೀಯರದೇ ಮೇಲುಗೈ. ಈ ಹೊಸ ಆರ್ಥಿಕತೆಯಲ್ಲಿ ನಾವೇಕೆ ಯಶಸ್ಸು ಸಾಧಿಸುತ್ತಿದ್ದೇವೆ ಎಂಬುದು ಬಹುಶಃ ಯಾರಿಗೂ ಅರ್ಥವಾಗದ ಸಂಗತಿ. ಆದರೆ, ಈ ಬಗ್ಗೆ ಸಿದ್ಧಾಂತವೊಂದನ್ನು ಈ ರೀತಿ ಮಂಡಿಸಬಲ್ಲೆ.

ಭಾರತೀಯರು ನೇರವಾಗಿ ಕೆಲಸಕ್ಕಿಳಿಯುವ ಮುನ್ನ, ಅದರ ಬಗ್ಗೆ ಮೊದಲು ಕಲ್ಪನಾಲೋಕದಲ್ಲಿ ಯೋಚಿಸುತ್ತಾರೆ. ಅಂದರೆ ಅವರು ತಕ್ಷಣದ ಪ್ರಯೋಗಶೀಲರಲ್ಲ. ಕೈಗಾರಿಕಾ ಕ್ರಾಂತಿಯಲ್ಲಿ ನಾವು ವಿಫಲವಾಗಲು ಇದು ಪ್ರಧಾನ ಕಾರಣ. ಪರಿಶ್ರಮಿಗಳು ತಮ್ಮ ಬುದ್ಧಿಮತ್ತೆ ಮತ್ತು ಮಾನಸಿಕ ಶಕ್ತಿಯನ್ನು ಮಾನವಶಕ್ತಿಯಾಗಿ ರೂಪಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಕೈಗಾರಿಕಾ ಕ್ರಾಂತಿ ನಡೆದಿರುವುದು ಇದೇ ಮಾದರಿಯಲ್ಲಿ. ಹಿಂದೆ ಭಾರತದಲ್ಲಿ ಚಿಂತನೆ, ಬುದ್ಧಿಮತ್ತೆಯಲ್ಲಿ ಬ್ರಾಹ್ಮಣರದು ಏಕಸ್ವಾಮ್ಯ ಮತ್ತು ಶೂದ್ರರು ಮುಖ್ಯವಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಆದುದರಿಂದಾಗಿ ಸಾಮಾಜಿಕವಾಗಿ ನಮ್ಮ ಸಮಾಜದಲ್ಲಿ ಸಂಪರ್ಕ ಕೊರತೆ ಏರ್ಪಟ್ಟಿತ್ತು ಮತ್ತು ಮಾನವಶಕ್ತಿಯ ಸಾಧ್ಯಾಸಾಧ್ಯತೆ ಪರಿಶೀಲಿಸುವ ಗತಿಯು ವಿಳಂಬವಾಯಿತು. ಲೈಸೆನ್ಸ್ ರಾಜ್‌ನ ತಪ್ಪು ನೀತಿಗಳು ಮತ್ತು ಅಧಿಕಾರಶಾಹಿಗಳೊಂದಿಗೆ ಈ ವೈಫಲ್ಯವೂ ಸೇರಿಕೊಂಡು ನಮ್ಮ ಕೈಗಾರಿಕಾ ಕ್ರಾಂತಿಗೆ ತಡೆಯಾಯಿತು.

ಆದರೆ, ಕೈಗಾರಿಕಾ ಯುಗದಲ್ಲಿ ಪ್ರತಿಕೂಲ ಎಂದು ಪರಿಗಣಿಸಲ್ಪಟ್ಟಿದ್ದ ಇದೇ ಬ್ರಾಹ್ಮಣ ಪಂಥಕ್ಕೆ, ಜ್ಞಾನ ಯುಗದಲ್ಲಿ ಹೆಚ್ಚಿನ ಅವಕಾಶ ದೊರೆಯಿತು. ಹಿಂದಿನ ಕಾಲದಿಂದಲೂ ಜ್ಞಾನದ ಬಗೆಗಿದ್ದ ನಮ್ಮ ಗೌರವಭಾವನೆಯೇ ಸಾಫ್ಟ್‌ವೇರ್ ಯುಗದಲ್ಲಿ ನಮ್ಮ ಯಶಸ್ಸಿಗೆ ಪ್ರಧಾನ ಪಾತ್ರಗಳಲ್ಲೊಂದಾಯಿತು.

ಭಾರತೀಯರು ಉಪನಿಷತ್ತುಗಳ ಪರಿಕಲ್ಪನೆಯ ತಿರುಳಿನೊಂದಿಗೆ ನಡೆಸುತ್ತಿರುವ ಹೋರಾಟಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ನಾವು ಶೂನ್ಯವನ್ನು ಶೋಧಿಸಿದ್ದೇವೆ. ಆಧ್ಯಾತ್ಮಿಕ ಜಗತ್ತು ಯಾವ ರೀತಿ ಆಗೋಚರವೋ, ಅದೇ ರೀತಿ ಸೈಬರ್ ಕ್ಷೇತ್ರ ಕೂಡ. ಆದುದರಿಂದ, ನಮ್ಮ ಪ್ರಧಾನ ಸ್ಪರ್ಧೆಯು ಗೋಚರವಾಗುವುದಿಲ್ಲ. ಭಾರತದ ಕೀರ್ತಿ ಪತಾಕೆ ಹಾರಿಸಬಲ್ಲ ಎಂಜಿನ್ ಆಗಿರುವ ಹಾಗೂ ದೇಶವನ್ನೇ ಪರಿವರ್ತನೆಗೊಳಿಸಬಲ್ಲ ಶಕ್ತಿಯುಳ್ಳ ಮಾಹಿತಿ ತಂತ್ರಜ್ಞಾನದ ಸ್ಪರ್ಧಾತ್ಮಕ ಲಾಭವನ್ನು ಕೊನೆಗೂ ಕಂಡುಕೊಂಡಿದ್ದೇವೆ. ಅಂತರ್ಜಾಲ ಕ್ಷೇತ್ರವೂ ಈ ಸ್ಪರ್ಧಾಕಣವನ್ನು ಸಮತಟ್ಟುಗೊಳಿಸಿದೆ ಮತ್ತು ಭಾರತೀಯ ಉದ್ಯಮಿಗಳ ಅವಕಾಶವನ್ನೂ ಹೆಚ್ಚಿಸಿದೆ.

ಈ ಎರಡು ಜಾಗತಿಕ ಪ್ರವೃತ್ತಿಗಳು ಭವಿಷ್ಯದಲ್ಲಿ ಭಾರತದ ಆರ್ಥಿಕ ಯಶಸ್ಸಿಗೆ ತಳಪಾಯ ಹಾಕಿಕೊಟ್ಟಿವೆ. ಅವು ಮಧ್ಯಮವರ್ಗವನ್ನು ಅತಿವೇಗದಿಂದ ಸೃಷ್ಟಿಸುತ್ತಿವೆ, ಅಂತೆಯೇ ಭಾರತವನ್ನು ಬಹಳ ಹಿಂದಿನ ಕಾಲದಿಂದಲೂ ಬಾಧಿಸುತ್ತಿದ್ದ ಸಮಸ್ಯೆಯಾದ ‘ಬಡತನ’ ನಿವಾರಣೆಯ ಆಶಾವಾದವನ್ನೂ ಎತ್ತರಿಸುತ್ತಿದೆ.

1980ಕ್ಕಿಂತ ಮುನ್ನ, ನಮ್ಮ ಅಭಿವೃದ್ಧಿ ದರವು ಶೇ.3.5 ಆಗಿದ್ದಾಗ, ನಾವು ಬಡತನದ ಬಗ್ಗೆ ಏನೂ ಕ್ರಮ ಕೈಗೊಳ್ಳುವಂತಿರಲಿಲ್ಲ. ಬಡತನ ನಿವಾರಣೆಗೆ ಅಭಿವೃದ್ಧಿಯೇ ಅತ್ಯಂತ ಸೂಕ್ತ ಚಿಕಿತ್ಸೆ ಹೊರತಾಗಿ, ಬಡವರ ಕಲ್ಯಾಣ ಕಾರ್ಯಕ್ರಮವಲ್ಲ. ಪ್ರಗತಿಯನ್ನು ಉತ್ತಮ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಜತೆಗೂಡಿಸಿದಾಗ, ಅಲ್ಲಿ ಬಡವರಿಗೆ ನೆರವಾಗುವ ಅತ್ಯುತ್ತಮ ವಿಧಾನವೊಂದು ರೂಪುಗೊಳ್ಳುತ್ತದೆ. ಇದೇ ಕಾರಣಕ್ಕೆ ದೇಶದ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಚಿವರು ಪ್ರಧಾನವಾಗುತ್ತಾರೆ. ದುರದೃಷ್ಟವೋ ಎಂಬಂತೆ, ನಾವು ಯಾವತ್ತೂ ಈ ಹುದ್ದೆಗೆ ಕೆಟ್ಟ ರಾಜಕಾರಣಿಗಳನ್ನೇ ನೇಮಿಸುತ್ತೇವೆ.

ನಾನು ಭಾರತವನ್ನು ಹುಲಿ ಎನ್ನುವುದರ ಬದಲು ಆನೆ ಎನ್ನುತ್ತೇನೆ. ಯಾಕೆ ಗೊತ್ತೇ? ಭಾರತಕ್ಕೆ ಮೊದಲು ದೊರೆತದ್ದು ಪ್ರಜಾಪ್ರಭುತ್ವ, ಆಮೇಲೆ ಬಂಡವಾಳಶಾಹಿತ್ವ. ಭಾರತ 1950ರಲ್ಲೇ ಪ್ರಜಾಪ್ರಭುತ್ವ ರಾಷ್ಟ್ರವಾಯಿತಾದರೂ, ಮಾರುಕಟ್ಟೆ ಶಕ್ತಿಗಳ ಮುಕ್ತ ತಾಣವಾಗಿ ಪರಿಣಮಿಸಿದ್ದು 1991ರ ನಂತರ. ಅಮೆರಿಕ ಹೊರತುಪಡಿಸಿ, ವಿಶ್ವದ ಎಲ್ಲಾ ಇತರ ರಾಷ್ಟ್ರಗಳಲ್ಲಿ ಇಂಥ ಪರಿಸ್ಥಿತಿ ತದ್ವಿರುದ್ಧ. ಈ ಕುತೂಹಲಕಾರಿ ಐತಿಹಾಸಿಕ ವಿಪರ್ಯಾಸವೇ ಭಾರತವು ಏಷ್ಯನ್ ಟೈಗರ್‌ಗಳಂತೆ ಅತಿವೇಗದ ಪ್ರಗತಿ ಸಾಧಿಸಲು ಅಥವಾ ಬಡತನವನ್ನು ಶೀಘ್ರ ತೊಡೆದುಹಾಕಲು ಅಡ್ಡಿಯಾಗಿರುವುದು. ನಿಜ ಹೇಳಬೇಕೆಂದರೆ ಪ್ರಜಾಸತ್ತೆ ಈ ವಿಳಂಬಕ್ಕೆ ಕಾರಣ. ಅಂದರೆ, ಇಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ಹೇರಲು ನಾ ಮೇಲು ತಾ ಮೇಲು ಅಂತ ಮುಂದಾಗುವುದರಿಂದ ನೀತಿಯೊಂದನ್ನು ಬದಲಾಯಿಸುವುದು ಭಾರೀ ಕಷ್ಟ. ಇದೇ ಕಾರಣಕ್ಕೆ ನಮ್ಮಲ್ಲಿ ಸುಧಾರಣೆಗಳು ಅತ್ಯಂತ ನಿಧಾನಗತಿಯಲ್ಲಿ ಮುನ್ನಡೆಯುತ್ತವೆ.

ಅದಕ್ಕೇ ಹೇಳಿರುವುದು. ಭಾರತದ ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಇರಿಸುತ್ತಿದೆ. ಚೀನಾ ಬಿಟ್ಟರೆ, ನಮ್ಮ ಆರ್ಥಿಕತೆಯು ವಿಶ್ವದ ಎರಡನೇ ಅತ್ಯಂತ ವೇಗದ ಸುಧಾರಣೆ ಕಾಣುತ್ತಿದೆ. ಚೀನಾ ವೇಗವಾಗಿದ್ದರೂ, ಇದರಿಂದ ನಾವೇನೂ ಮನೋಸ್ಥೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಕೊನೆಯಲ್ಲಿ ಜೀವನವೆಂಬುದು ಕೇವಲ ಚೀನಾ ಮತ್ತು ಭಾರತದ ನಡುವಣ ಸ್ಪರ್ಧೆಯಲ್ಲ. ಪ್ರಜಾಪ್ರಭುತ್ವವಿಲ್ಲದೆಯೇ ಶೇ.9ರ ಪ್ರಗತಿ ಸಾಧಿಸುವುದಕ್ಕಿಂತ ಪ್ರಜಾಪ್ರಭುತ್ವದಲ್ಲಿ ಶೇ.7ರ ಪ್ರಗತಿ ಸಾಧಿಸುವುದು ಒಳ್ಳೆಯದೇ.

ವಾಸ್ತವವಾಗಿ, ಪ್ರಜಾಸತ್ತೆಯೊಂದಿಗೆ ಚೀನಾದಿಂದ ಶೇ.2ರಷ್ಟು ನಿಧಾನವಾಗಿ ಪ್ರಗತಿ ಸಾಧಿಸುವುದಕ್ಕೇ ಹೆಚ್ಚಿನ ಭಾರತೀಯರು ಮತ ಹಾಕಬಹುದು. ಚೀನಾದಿಂದ 25 ವರ್ಷ ಹಿಂದೆ ಬಿದ್ದರೂ ಪರವಾಗಿಲ್ಲ ಎಂಬ ಮನೋಭಾವವಿದೆ. ಇದು ಪ್ರಜಾಸತ್ತೆಯ ವೆಚ್ಚ, ಮತ್ತು ಹೆಚ್ಚಿನ ಭಾರತೀಯರು ಇದನ್ನು ಭರಿಸಲು ಸಿದ್ಧರಾಗಿದ್ದಾರೆ.

ಏನೇ ಆದರೂ, ನಾವು ಈ ಭರ್ಜರಿ ಅಭ್ಯುದಯದ ಮತ್ತು ಮುಕ್ತ, ಪ್ರಜಾಪ್ರಭುತ್ವ ಸಮಾಜದಲ್ಲಿ ಬಡತನದ ನಿವಾರಣೆಗೆ ಈ ಕ್ಷಣಕ್ಕಾಗಿ 3000 ವರ್ಷ ಕಾದಿದ್ದೇವೆ.

(ಲೇಖಕರು ಪ್ರಾಕ್ಟರ್&ಗ್ಯಾಂಬಲ್ ಇಂಡಿಯಾದ ಮಾಜಿ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ. ಅವರ “ಮುಕ್ತ ಭಾರತ್” ಎಂಬ ಪುಸ್ತಕವೂ ಪ್ರಕಟವಾಗಿದೆ.)

Share this Story:

Follow Webdunia kannada