Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ಚಂಪಕಾವತಿ

ವೆಬ್‌ದುನಿಯಾ ವಾರದ ಬ್ಲಾಗ್: ಚಂಪಕಾವತಿ
, ಗುರುವಾರ, 3 ಏಪ್ರಿಲ್ 2008 (20:16 IST)
ಸುನಂವಿ
WD
"ಇಲ್ಲಿ ಋಷಿಗಳ ವೇಷ ತೊಟ್ಟವರು ಆರಾಮವಾಗಿ ಸಿಗರೇಟು ಸೇದುತ್ತಾರೆ. ಸೀರೆ ಉಟ್ಟ ಹುಡುಗ, ಸೆರಗು ಯಾವ ಹೆಗಲಿಗೆಂದು ಗಲಿಬಿಲಿಗೊಳ್ಳುತ್ತಾನೆ. ರೈತನ ವೇಷ ತೊಟ್ಟ ಪೇಟೆ ಹುಡುಗಿ ನಾಚಿಕೆಯಿಂದ ಮುದುಡಿಹೋಗುತ್ತಾಳೆ. ಒಂದರ ಹಿಂದೊಂದು ಪ್ರವೇಶ. ಪರದೆ ಎಳೆಯುವವನೇ ಇಲ್ಲ ! ಚಂಪಕಾವತಿಯ ಎಣ್ಣೆ ಕೊಪ್ಪರಿಗೆಗೆ ಇಲ್ಲಿಂದ ಒಂದೇಒಂದು ಉರುಳು ! ಸ್ವಾಗತವು ನಿಮಗೆ."

ಇವು ಚಂಪಕಾವತಿ ಬ್ಲಾಗಿನ ಹಣೆಬರಹದ ಕೆಳಗೆ ಕಾಣಿಸುವ ಸಾಲುಗಳು. ಇವುಗಳನ್ನು ಓದಿದ ಕೂಡಲೇ ಈ ಬ್ಲಾಗಿನ ಉದ್ದೇಶ ನಮ್ಮ ಮುಂದೆ ಗರಿಗೆದರುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಪರಿಮಿತ ಆಸಕ್ತಿ ಹೊಂದಿರುವಂತೆ ತೋರುವ ಸುಧನ್ವಾ ಅವರು ಚಂಪಕಾವತಿಯಲ್ಲಿ (deraje.blogspot.com) ತಮ್ಮ ಅನುಭವಗಳನ್ನು ತೋಡಿಕೊಳ್ಳುತ್ತಾರೆ ಹಾಗೂ ಚರ್ಚಿಸುತ್ತಾರೆ.

ಪತ್ರಕರ್ತರಾಗಿರುವ ಸುಧನ್ವಾ ದೇರಾಜೆ ಅವರು ತಾವೇ ಹೇಳಿಕೊಂಡಂತೆ ಸಾಹಿತ್ಯ, ನಾಟಕ, ಸಿನೆಮಾ, ಯಕ್ಷಗಾನ, ಕ್ರಿಕೆಟ್ ಎಂಬ ಐದು ವ್ಯಸನಗಳಿಗೆ ಗುರಿಯಾಗಿದ್ದಾರೆ. ಈ ಚಂಪಕಾವತಿಯಲ್ಲಿ ಅವರ ಈ ಐದೂ ವ್ಯಸನಗಳು ಕಾಣುತ್ತವೆಯಾದರೂ ನಾಟಕದ ವ್ಯಸನದಿಂದ ಅವರು ಹೆಚ್ಚು ಪೀಡಿತರಾಗಿರುವುದನ್ನು ನಾವು ನೀವು ನೋಡಿ ಸಂತೋಷಿಸಬಹುದು.

ನೀನಾಸಂನ ತಿರುಗಾಟ ನಾಟಕ ತಂಡದಿಂದ ಪ್ರದರ್ಶಿತವಾದ 'ಲೋಕೋತ್ತಮೆ' ನಾಟಕದ ಬಗ್ಗೆ ಸುಧನ್ವಾ ದೇರಾಜೆ ಬರೆದ ಒಂದು ಅನಿಸಿಕೆ ಮತ್ತು ವಿಮರ್ಶೆಯು ಅವರ ಬ್ಲಾಗಿನ ಗಂಭೀರತೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿದೆ. ಕನ್ನಡ ರಂಗಭೂಮಿ ಬಗ್ಗೆ ಅಥವಾ ಒಟ್ಟಾರೆ ರಂಗಭೂಮಿಯ ಬಗ್ಗೆ ಬರೆಯುವ ಒಂದೇ ಒಂದು ಬ್ಲಾಗು ನಮ್ಮ ಕಣ್ಮುಂದೆ ಇಲ್ಲದಿದ್ದ ಸಮಯದಲ್ಲಿ ಚಂಪಕಾವತಿಯನ್ನು ಒಂದು ಮಾದರಿ ಬ್ಲಾಗ್ ಮಾಡುವ ಅವಕಾಶ ಸುಧನ್ವಾ ಅವರಿಗಿದೆ. ರಂಗಸಜ್ಜಿಕೆಯನ್ನು ಮಾಡಿ ಪ್ರಖ್ಯಾತಿಗೆ ಏರಿದ ಶಶಿಧರ್ ಅಡಪ ಅವರ ಒಂದು ಸಂದರ್ಶನ ಚಂಪಕಾವತಿಯಲ್ಲಿ ಕಾಣಿಸಿಕೊಂಡಿದ್ದು ಗಮನಾರ್ಹ.

ದಕ್ಷಿಣ ಕನ್ನಡ ಜಿಲ್ಲೆಯವರಾದ ಸುಧನ್ವಾ ದೇರಾಜೆ ಅವರಿಗೆ ಯಕ್ಷಗಾನ ಒಂದು ಸಹಜ ಒಲವು. ಹೀಗಾಗಿ ಚಂಪಕಾವತಿಯಲ್ಲಿ ಯಕ್ಷಗಾನ ಸಾಕಷ್ಟು ಬಾರಿ ಕಾಣಿಸಿಕೊಳ್ಳುತ್ತದೆ. ಸುಧನ್ವಾರವರ ಮನರಂಜನೆಯ ಆಟಿಕೆ ಕ್ರಿಕೆಟ್. ಅವರು ಆಗೊಮ್ಮೆ ಈಗೊಮ್ಮೆ ಸಿಕ್ಸರ್ ಭಾರಿಸುತ್ತಾರೆ. ನಾಟಕ ಮತ್ತು ಯಕ್ಷಗಾನದಲ್ಲಿ ಒಲವು ಇದೆ ಎಂದ ಮೇಲೆ ಸಾಹಿತ್ಯದ ಮೇಲೆ ಆಸಕ್ತಿ ಇರುವುದು ಸಹಜವೇ. ಹಾಗಾಗಿ ಚಂಪಕಾವತಿಯಲ್ಲಿ ಸಿಕ್ಕಾಗಲೆಲ್ಲಾ ಸಾಹಿತ್ಯ ವ್ಯಾಪಿಸುತ್ತದೆ. ಆದರೆ ಅವರ ಮೂಲಾಸಕ್ತಿ ನಾಟಕ ಮತ್ತು ಯಕ್ಷಗಾನ ಇರುವುದರಿಂದಲೋ ಏನೋ ದೇರಾಜೆ ಅವರು ಸಾಹಿತ್ಯ ಲೇಖನಗಳ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ.

ಕನ್ನಡ ಬ್ಲಾಗ್ ವಲಯ ಪ್ರವರ್ಧಿಸುತ್ತಿರುವ ಈ ಸಮಯದಲ್ಲಿ ಸುಧನ್ವಾ ದೇರಾಜೆಯವರ ಚಂಪಕಾವತಿಗೆ ಹೊಸ ಬ್ಲಾಗಿಗರನ್ನು ಪ್ರೇರೇಪಿಸುವ ಶಕ್ತಿಯಿದೆ. ಇದಕ್ಕಾಗಿ ಅವರು ಚಂಪಕಾವತಿಯಲ್ಲಿ ರಂಗಭೂಮಿ ಮತ್ತು ಯಕ್ಷಗಾನವನ್ನಷ್ಟೇ ಉಳಿಸಿಕೊಂಡರೆ ಒಳ್ಳೆಯದು.

Share this Story:

Follow Webdunia kannada