Select Your Language

Notifications

webdunia
webdunia
webdunia
webdunia

ನಾಡು-ನುಡಿ ರಕ್ಷಣೆಗೆ ಬದ್ಧ: ನುಡಿ ಹಬ್ಬಕ್ಕೆ ಸಿಎಂ ಚಾಲನೆ

ನಾಡು-ನುಡಿ ರಕ್ಷಣೆಗೆ ಬದ್ಧ: ನುಡಿ ಹಬ್ಬಕ್ಕೆ ಸಿಎಂ ಚಾಲನೆ
ಬೆಂಗಳೂರು , ಶುಕ್ರವಾರ, 4 ಫೆಬ್ರವರಿ 2011 (15:15 IST)
PR
ಉದ್ಯಾನಗರಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನುಡಿ ಜಾತ್ರೆಯ ಅಧ್ಯಕ್ಷ ಪಟ್ಟ ವಹಿಸಿದ್ದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡಪ್ರಭು ಕೆಂಪೇಗೌಡ ಮಹಾಮಂಟಪದಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಸಾಹಿತ್ಯ ಜಾತ್ರೆಗೆ ಚಾಲನೆ ನೀಡಿದ ನಂತರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಹಾನಗರ ರಾಜ್ಯದ ರಾಜಧಾನಿಯಲ್ಲಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ನಾಲ್ಕು ದಶಕಗಳ ನಂತರ ಈ ನಾಡ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ ಕೂಡ ಕೇಂದ್ರ ಸರಕಾರದಿಂದ ಅದಕ್ಕೆ ಬೇಕಾದ ಸೌಲಭ್ಯಗಳು ದೊರೆಯಬೇಕಾಗಿದೆ. ಅದಕ್ಕಾಗಿ ಎಲ್ಲರೂ ಪೂರ್ಣಪ್ರಮಾಣದಲ್ಲಿ ಶ್ರಮಿಸಬೇಕಾಗಿದೆ. ನುಡಿಯ ಆರಾಧನೆ ಸಾಹಿತ್ಯ ಸಮ್ಮೇಳನದ ಧ್ಯೇಯವಾಗಿದೆ. ಈ ಸಮ್ಮೇಳನದಲ್ಲಿ ಬರಹಗಾರರು, ಚಿಂತಕರು, ಪಂಡಿತರ ನಡುವೆ ನಡೆಯುವ ಚರ್ಚೆ ನಾಡಿಗೆ ದೊಡ್ಡ ಕೊಡುಗೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ಕನ್ನಡದ ನಾಡು-ನುಡಿಯ ಬೆಳವಣಿಗೆಗೆ ಬದ್ದ ಎಂದು ಹೇಳಿದರು.

ಪ್ರೊ.ಜಿ.ವೆಂಕಟಸುಬ್ಬಯ್ಯನವರು ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಸಾಹಿತ್ಯ ಲೋಕಕ್ಕೆ ಸಂದ ಗೌರವವಾಗಿದೆ. ನಾನು ಆರು ಕೋಟಿ ಕನ್ನಡಿಗರ ಸೇವಕ ಎಂದ ಮುಖ್ಯಮಂತ್ರಿಗಳು, ಕನ್ನಡ ಭಾಷೆ ಅಭಿವೃದ್ದಿಗೆ 200 ಕೋಟಿ ನೀಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದರು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ತಲಾ 45 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.

ಗಡಿನಾಡು, ಹೊರನಾಡ ಕನ್ನಡಿಗರ ರಕ್ಷಣೆಗೆ ಸರಕಾರ ಬದ್ಧ. ಎಲ್ಲಾ ಹಂತಗಳಲ್ಲೂ ಕನ್ನಡ ಆಡಳಿತ ಭಾಷೆಯಾಗಬೇಕು ಎಂದರು. ಸಮ್ಮೇಳನ ಸ್ಮಾರಕ ಭವನಕ್ಕೆ ಐದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸಚಿವ ಆರ್. ಅಶೋಕ್ ಅವರು ಸ್ವಾಗತ ಭಾಷಣ ಕೋರಿದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ಬಾಲಗಂಗಾಧರನಾಥ ಸ್ವಾಮಿ, ಸಂಸದ ಅನಂತಕುಮಾರ್, ಸಚಿವರಾದ ಸುರೇಶ್ ಕುಮಾರ್, ದೇ.ಜವರೇಗೌಡ, ಡಾ. ಗೀತಾ ನಾಗಭೂಷಣ್, ರಾಜ್ಯಸಭೆ ಸದಸ್ಯೆ ಬಿ. ಜಯಶ್ರಿ, ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಪಿಜಿಆರ್ ಸಿಂಧ್ಯಾ, ಡಾ. ಡಿ. ಹೇಮಚಂದ್ರ ಸಾಗರ್, ಡಾ. ಎಂ.ಎಂ. ಕಲಬುರ್ಗಿ, ಚಂಪಾ, ಮಾಜಿ ರಾಜ್ಯಪಾಲ ರಾಮಾ ಜೋಯಿಸ್, ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ಕಾರ್ಪೊರೇಷನ್‌ನಿಂದ ಬೆಳಗ್ಗೆ 10 ಗಂಟೆಗೆ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಗಾಂಧಿನಗರದಿಂದ ಮೆರವಣಿಗೆ ಆರಂಭಿಸಿದ್ದ ಸಿನಿ ಕಲಾವಿದರ ದಂಡು ನ್ಯಾಷನಲ್ ಕಾಲೇಜಿನಲ್ಲಿ ಒಟ್ಟಿಗೆ ಬಂದು ಸೇರಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮ್ಮಳಾನಧ್ಯಕ್ಷ ಕನ್ನಡ ಪದ ಪಂಡಿತ, ಮಂಡ್ಯ ಮಣ್ಣಿನ ದಿಗ್ಗಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಸಮ್ಮೇಳನ ಸ್ಥಳಕ್ಕೆ ಬರ ಮಾಡಿಕೊಂಡರು.

Share this Story:

Follow Webdunia kannada