Select Your Language

Notifications

webdunia
webdunia
webdunia
webdunia

ಕನ್ನಡ ಸಾಹಿತ್ಯ ಸಮ್ಮೇಳನ - ಬಂತು ನಮ್ ಬೆಂಗಳೂರಿಗೆ!

ಕನ್ನಡ ಸಾಹಿತ್ಯ ಸಮ್ಮೇಳನ - ಬಂತು ನಮ್ ಬೆಂಗಳೂರಿಗೆ!
[ಕನ್ನಡಿಗರೇ ಇಲ್ಲದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗೆದ್ದಿರುವ ಬೆಂಗಳೂರಿನಲ್ಲೇ ಈ ಬಾರಿ ಆಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹತ್ವ ಹೆಚ್ಚು. ಕನ್ನಡ ನಾಮಫಲಕ ಅಳವಡಿಕೆಯ ಕುರಿತ ಶಾಸನವೊಂದು ಜಾರಿಗೆ ಬರುವುದಕ್ಕೆ 25 ವರ್ಷವಾದರೂ ಸಾಧ್ಯವಾಗಿಲ್ಲ ಎನ್ನುತ್ತಿದ್ದಾರೆ ಬ್ಲಾಗರ್ (vasantabanda.blogspot.com) ವಸಂತ ಶೆಟ್ಟಿ. ಓದಿ ನೋಡಿ. - ಸಂಪಾದಕರು ]
NRB
41 ವರ್ಷಗಳ ದೊಡ್ಡ ಅಂತರದ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ರಾಜಧಾನಿ ಬೆಂಗಳೂರಿಗೆ ಬರುತ್ತಿದೆ. 1970ರ ಬೆಂಗಳೂರಿಗೂ, 2011ರ ಬೆಂಗಳೂರಿಗೂ ಆಕಾಶ-ಭೂಮಿಗಿರುವಷ್ಟು ಅಂತರವಿದೆ. ಬೆಂಗಳೂರಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯವಾದ ಬದಲಾವಣೆಯಾಗಿದೆ. ಜಾಗತೀಕರಣದ ನಂತರ ಶುರುವಾದ ಐಟಿ ಕ್ರಾಂತಿ, ತದನಂತರ ಕೋಡಿ ಬಿದ್ದ ಕೆರೆಯಂತೆ ಹರಿದು ಬಂದ ವಲಸಿಗರ ಅಬ್ಬರದಲ್ಲಿ ಬೆಂಗಳೂರು ಖಂಡಿತ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ಬರುತ್ತಿರುವ ಸಮ್ಮೇಳನ ಖಂಡಿತವಾಗಿಯೂ ಪ್ರಮುಖವಾದದ್ದು, ಅಲ್ಲಿ ಆಗಬೇಕಾದ ಚರ್ಚೆ, ನಡೆಯಬೇಕಾದ ವಿಚಾರ-ವಿಮರ್ಶೆ, ತೆಗೆದುಕೊಳ್ಳಬೇಕಾದ ನಿಲುವು ಎಲ್ಲವೂ ಬೆಂಗಳೂರು, ಕರ್ನಾಟಕದ ಮುಂದಿನ ದಾರಿಗೆ ದಿಕ್ಸೂಚಿಯಾಗಬಲ್ಲಂತದ್ದು ಅನ್ನುವುದು ನನ್ನ ಅನಿಸಿಕೆ.

ಬೆಂಗಳೂರಿಗೆ ಅಷ್ಟೊಂದು ಮಹತ್ವ ಯಾಕೆ?
ಇದೆಲ್ಲ ಸರಿ, ಆದ್ರೆ ಬೆಂಗಳೂರಲ್ಲಿ ಸಾಹಿತ್ಯ ಸಮ್ಮೇಳನ ಆದ್ರೆ ಅದಕ್ಯಾಕೆ ಅಷ್ಟು ಮಹತ್ವ ಅನ್ನಿಸಬಹುದು. ಬೆಂಗಳೂರು ಅನ್ನುವುದು ಕರ್ನಾಟಕದ ಬೇರೆ ಊರುಗಳಂತಲ್ಲ. ಇಡೀ ಕರ್ನಾಟಕದ, ಕನ್ನಡಿಗರ ಕಲಿಕೆ, ದುಡಿಮೆ, ಬದುಕು ರೂಪಿಸಬೇಕಾದ ವ್ಯವಸ್ಥೆಯಾದ ಸರ್ಕಾರ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಸಾಂಸ್ಕೃತಿಕ ಗುರುತುಗಳಲ್ಲೊಂದಾದ ಕನ್ನಡ ಚಿತ್ರೋದ್ಯಮ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಕಳೆದ 60 ವರ್ಷಗಳ ಇತಿಹಾಸದಲ್ಲಿ ರೂಪುಗೊಂಡ ಹತ್ತು ಹಲವು ನಾಡ ಪರ, ಭಾಷೆ ಪರ ಚಳುವಳಿಗಳಿಗೆ ಹೊಸ ದಿಕ್ಕು ತೋರಿಸಿದ, ಜನಾಭಿಪ್ರಾಯ ರೂಪಿಸುವಲ್ಲಿ ಕೆಲಸ ಮಾಡಿದ ಹತ್ತು ಹಲವು ಕನ್ನಡ ಚಿಂತಕರು, ಸಂಘಟನೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ. ಕರ್ನಾಟಕದ ರಾಜಕೀಯ, ಆಡಳಿತ ವ್ಯವಸ್ಥೆಯನ್ನು ಹದ್ದಿನ ಕಣ್ಣಿನಿಂದ ಬೆನ್ನು ಬಿಡದೇ ಕಾಯುತ್ತಿರುವ ಸುದ್ದಿ, ದೃಶ್ಯ ಮಾಧ್ಯಮಗಳಿಗೂ ಬೆಂಗಳೂರೇ ಕೇಂದ್ರ ಸ್ಥಾನ. ಇವೆಲ್ಲದಕ್ಕೂ ಮಿಗಿಲಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಬಹು ಪಾಲು ನಿಯಂತ್ರಿಸುತ್ತಿರುವುದು ಬೆಂಗಳೂರೆಂಬ ಕೆಂಪೇಗೌಡರ ಊರು. ಕರ್ನಾಟಕದ ಪಾಲಿನ ಹೆಚ್ಚಿನ ಎಲ್ಲ ಸ್ಟೇಕ್‌ಹೋಲ್ಡರುಗಳೂ ಇರೋ ಬೆಂಗಳೂರಲ್ಲಿ, ಇವರೆಲ್ಲರ ನಡುವೆ ನಡೀತಿರೋ ಈ ಸಮ್ಮೇಳನ ನಿಜಕ್ಕೂ ಮಹತ್ವದ್ದೇ.

ಕೆಲ ಮುಖ್ಯ ವಿಷಯಗಳು, ಬೇಡಿಕೆಗಳ
ಎಲ್ಲ ಸರಿ, ಆದ್ರೆ ಈ ಸಮ್ಮೇಳನದಲ್ಲಿ ಬರೀ ಲಲಿತ ಸಾಹಿತ್ಯ, ಕವಿ ಗೋಷ್ಠಿ, ಹಾಸ್ಯ ಸಂಜೆ ಅಂತ ವಾಡಿಕೆಯಂತೆ ಸಮ್ಮೇಳನ ಕಳೆಯದೇ, ಸಮ್ಮೇಳನ ನಿಜವಾದ ಅರ್ಥದಲ್ಲಿ ಸಾರ್ಥಕತೆ ಕಾಣಲು ಕೆಲವು ಮುಖ್ಯವಾದ ವಿಷಯಗಳು, ಬೇಡಿಕೆಗಳ ಬಗ್ಗೆ ಎಲ್ಲ ಪಾಲುದಾರರು ಗಮನ ಹರಿಸಬೇಕು. ನನಗನಿಸಿದ ಕೆಲ ವಿಷಯಗಳು:

ವಲಸಿಗರ ಪ್ರವಾಹವನ್ನೇ ಕಾಣುತ್ತಿರುವ ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಕನ್ನಡೇತರರನ್ನು ಕನ್ನಡ ಮುಖ್ಯವಾಹಿನಿಗೆ ತರುವತ್ತ ಎಲ್ಲ ಪ್ರಯತ್ನಗಳಾಗಬೇಕು. ಅಲಾಯನ್ಸ್ ಫ್ರೆಂಚ್, ಮ್ಯಾಕ್ಸ್‌ಮ್ಯೂಲರ್‌ನಂತಹ ಫ್ರೆಂಚ್, ಜರ್ಮನ್ ಕಲಿಸುವ ಸಂಸ್ಥೆಗಳಂತೆ ಕನ್ನಡ ಕಲಿಸುವ ವಿಶ್ವ ದರ್ಜೆಯ ಸಂಸ್ಥೆಗಳನ್ನು ಹುಟ್ಟು ಹಾಕುವಂತಹಾ, ಅದಕ್ಕೆ ಬೇಕಾದ ಪರಿಸರ ಕಟ್ಟುವಂತಹಾ ಪ್ರಯತ್ನವನ್ನು ಸಂಬಂಧ ಪಟ್ಟವರು ಮಾಡಬೇಕು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕನ್ನಡ ಅನ್ನುವುದು ಮಾರುಕಟ್ಟೆಯ ಮೊದಲ ಆಯ್ಕೆಯ ಭಾಷೆಯಾಗಿ ಬಳಕೆಯಲ್ಲಿಲ್ಲ. ಕನ್ನಡ ಒಂದು ಬಳಕೆ ಮೌಲ್ಯ ಇರುವ, ಜೀವಂತಿಕೆಯುಳ್ಳ ಮಾರುಕಟ್ಟೆಯ ಭಾಷೆಯಾಗಿ ಬಳಕೆಯಾಗದಿರುವುದು ಕಂಡು ಬರುತ್ತದೆ. ಕನ್ನಡದಲ್ಲಿ ಸೇವೆ ದೊರೆಯದೇ ಗ್ರಾಹಕರಿಗೆ ತೊಂದರೆಗೀಡಾಗಿರುವ ನೂರಾರು ಉದಾಹರಣೆಗಳಿದ್ದರೂ ಗ್ರಾಹಕಸೇವೆಯಲ್ಲಿ ಕನ್ನಡದ ಬಳಕೆಗೆ ಅವಕಾಶ ಕಲ್ಪಿಸುವ ಕಾನೂನು ಇಂದಿಗೂ ಇಲ್ಲ. ಗ್ರಾಹಕಸೇವೆಯ ಕಾನೂನು ಅಂದರೆ ಬರೀ ತೂಕ, ಅಳತೆ ಅನ್ನುವುದಕ್ಕೆ ಸೀಮಿತವಾಗಿರುವಾಗ, ಗ್ರಾಹಕಸೇವೆಯ ಭಾಷಾ ಆಯಾಮಕ್ಕೂ ಕಾನೂನಿನ ಬಲ ನೀಡುವ ಕಾಯ್ದೆ ರೂಪಿಸುವ ದೊಡ್ಡ ಹೊಣೆಗಾರಿಕೆ ಸರ್ಕಾರದ ಮೇಲಿದೆ.

ಕನ್ನಡಕ್ಕಾಗಿ ಕೈಎತ್ತದ ಸರಕಾ
ಕನ್ನಡ ಕೆಲ ವಿಷಯಕ್ಕೆ ಮಾತ್ರ ಸೂಕ್ತ. ಕಲಿಕೆ, ತಂತ್ರಜ್ಞಾನದಂತಹ ವಿಷಯಗಳಲ್ಲಿ ಕನ್ನಡಕ್ಕೆ ಯೋಗ್ಯತೆಯೇ ಇಲ್ಲ ಅನ್ನುವ ಆತ್ಘಾತುಕ ಮನಸ್ಥಿತಿ ನಮ್ಮ ಸರ್ಕಾರಕ್ಕೆ ಇದ್ದಂತಿದೆ. ಕನ್ನಡದಲ್ಲಿ ಉನ್ನತ ಶಿಕ್ಷಣ ತರುವ ಯಾವ ಪ್ರಯತ್ನವನ್ನು ಮಾಡದೇ ಸರ್ಕಾರ ಕೈ ಚೆಲ್ಲಿದೆ. ಸಾಲದ್ದಕ್ಕೆ ತನ್ನ ವ್ಯಾಪ್ತಿಯಲ್ಲಿದ್ದ ಪಾಲಿಕೆ ಶಾಲೆಗಳಲ್ಲಿ ಸಿಬಿಎಸ್ಇ ಪಠ್ಯಕ್ರಮ ಜಾರಿ ಮಾಡಿ ಅದನ್ನೇ ಸಾಧನೆ ಎಂದು ಕರೆದುಕೊಳ್ಳುವ ಹುಚ್ಚು ಪ್ರಯತ್ನವನ್ನು ಮಾಡಿತ್ತು. ಸರ್ಕಾರಕ್ಕೆ ಕಲಿಕೆಯಲ್ಲಿ ತಾಯ್ನುಡಿಯ ಪಾತ್ರದ ಮಹತ್ವವೇ ಅರಿವಾದಂತಿಲ್ಲ. ಒಂದು ಸಮಯಾಧಾರಿತ ವ್ಯವಸ್ಥೆ ರೂಪಿಸಿ ಅದರಡಿ ಕಲಿಕೆಯಲ್ಲಿ ಆಗಬೇಕಾದ ಸುಧಾರಣೆ, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ತರಲು ಬೇಕಿರುವ ಕಾರ್ಯ ಯೋಜನೆಯನ್ನು ಪ್ರಕಟಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಒಳ್ಳೆಯ ಬದುಕು ಕೊಡಲು ಕನ್ನಡಕ್ಕೆ ಯೋಗ್ಯತೆ ಇಲ್ಲ ಅನ್ನುವ ಮನಸ್ಥಿತಿಯಿಂದ ಜನಸಾಮಾನ್ಯರು ಇಂಗ್ಲಿಷ್ ಅನ್ನು ಅಪ್ಪಿಕೊಳ್ಳುತ್ತಿದ್ದಾರೆ. ಕನ್ನಡ ಓದಲು, ಬರೆಯಲು ಬಾರದ ಒಂದು ಹೊಸ ಪೀಳಿಗೆಯೇ ಹುಟ್ಟಿಕೊಳ್ಳುತ್ತಿದೆ. ಹೀಗಿರುವಾಗ ಮುಂದೊಂದು ದಿನ ಸಾಹಿತ್ಯ ಸಮ್ಮೇಳನದ ನೂರಾರು ಪುಸ್ತಕ ಮಳಿಗೆಗಳಲ್ಲಿ ಭರ್ಜರಿ ರಿಯಾಯಿತಿ ಕೊಟ್ಟರೂ ಕನ್ನಡ ಪುಸ್ತಕ ಓದುವವರೇ ಇರದಂತಾಗಬಹುದು. ಹೀಗಾಗಿ ಕನ್ನಡದಲ್ಲಿ ಒಳ್ಳೆಯ ಕಲಿಕೆ, ಒಳ್ಳೆಯ ದುಡಿಮೆ ಹುಟ್ಟವಂತಹಾ ವ್ಯವಸ್ಥೆ ನಿರ್ಮಿಸುವತ್ತ ಎಲ್ಲ ಪಾಲುದಾರರು ಗಮನಹರಿಸಬೇಕು.

ತಂತ್ರಜ್ಞಾನ ಬದಲಾಗುತ್ತಿರುವ ವೇಗಕ್ಕೆ ಕನ್ನಡವೂ ತಂತ್ರಜ್ಞಾನ-ಶಕ್ತವಾಗಬೇಕಾದ ತುರ್ತು ಅಗತ್ಯವಿದೆ. ಅದು ಕಂಪ್ಯೂಟರ್, ಮೊಬೈಲ್‌ನಿಂದ ಹಿಡಿದು ಎಟಿಎಂ/ಐವಿಆರ್‌ನಂತಹ ಬ್ಯಾಂಕ್ ವ್ಯವಸ್ಥೆಯವರೆಗೆ ಎಲ್ಲ ರೀತಿಯಲ್ಲೂ ತಂತ್ರಜ್ಞಾನ ಅಳವಡಿಕೆಗೆ ಸಿದ್ದವಾಗಬೇಕಿದೆ. ಕನ್ನಡಕ್ಕೆ ಇಂತಹ ಯೋಗ್ಯತೆ ಬಂದಾಗಲಷ್ಟೇ ಅದು ಯುವಕರನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ಸಾಧ್ಯ. ಈ ವಿಷಯದ ಬಗ್ಗೆಯೂ ಸಮ್ಮೇಳನದಲ್ಲಿ ಗೋಷ್ಠಿಗಳು ನಡೆಯಬೇಕು.

ಮಹಿಷಿ ವರದಿ ಜಾರಿಯಾಗಲಿ
ಜಾಗತೀಕರಣದ ನಂತರದ ದಿನಗಳಲ್ಲಿ ಬೆಂಗಳೂರು ಅತಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ನಗರವಾಗಿ ಪರಿವರ್ತನೆಗೊಂಡಿದೆ. ಆದರೆ ಈ ಬದಲಾವಣೆಯ ಫಲ ಮಾತ್ರ ಕನ್ನಡಿಗರಿಗೆ "ಕನ್ನಡಿಯೊಳಗಿನ ಗಂಟೇ" ಆಗಿದೆ. 41 ವರ್ಷಗಳ ನಂತರ ರಾಜಧಾನಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ಸಂದರ್ಭದಲ್ಲಿ ಸರ್ಕಾರ ಈ ಕಾಲಮಾನಕ್ಕೆ ಹೊಂದುವಂತೆ ಬದಲಾಯಿಸಿದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತಂದು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡುವತ್ತ ಕಾನೂನು ರೂಪಿಸುವ, ಅದನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಪ್ರಕಟಿಸಬೇಕಿದೆ. ಈ ಸಮ್ಮೇಳನದ ಎಲ್ಲ ಪಾಲುದಾರರು ಈ ಬಗ್ಗೆಯೂ ಕೊಂಚ ಗಮನ ಹರಿಸಬೇಕು.

ಕನ್ನಡ ಫಲಕ ಅನುಷ್ಠಾನಕ್ಕೆ 25 ವರ್ಷ ಸಾಲಲ್ವೇ?
ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ 24ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಆದರೆ ಈ ಕಾನೂನು ಇಂದಿಗೂ ಅನುಷ್ಠಾನಕ್ಕೆ ಬಂದಿಲ್ಲ. 1985ರಲ್ಲೇ ಈ ಕಾನೂನು ಬಂದಿದೆ. ಕಾನೂನು ಬಂದಾಗ ಇದ್ದದ್ದು 50 ರೂಪಾಯಿ ದಂಡ. ಇವತ್ತು 25 ವರ್ಷದ ನಂತರ ಆ ದಂಡದ ಮೊತ್ತ 10,000 ವರೆಗೂ ಹೋಗಿದೆ. ಒಂದು ಸರಳವಾದ ಕಾನೂನು ಅನುಷ್ಠಾನಕ್ಕೆ 25 ವರ್ಷ ಸಾಕಾಗಲ್ವ? ಈಗಲಾದರೂ ಇದರ ಬಗ್ಗೆ ಗಮನ ಹರಿಸಲಿ.

ಬ್ಯಾಂಗಲೋರ್ ಅನ್ನುವ ಬ್ರಿಟಿಷರ ಬಳುವಳಿ ಇನ್ನೂ ಬೆಂಗಳೂರು ಎಂದು ಬದಲಾಗಿಲ್ಲ. 2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು. 2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಸಾಹಿತ್ಯ ಸಮ್ಮೇಳನ ನಡೀತಿರೋ ಈ ಸಂದರ್ಭದಲ್ಲಾದರೂ ಜನರ ಭಾವನೆಗಳನ್ನು ಗೌರವಿಸುವಂತಹ ಇಂತಹ ವಿಷಯಗಳ ಬಗ್ಗೆ ಎಲ್ಲ ಪಾಲುದಾರರು ಗಮನ ಹರಿಸಿದರೆ ಸಮ್ಮೇಳನಕ್ಕೆ ಕಳೆ ಕಟ್ಟುತ್ತದೆ.

ಸಾಹಿತ್ಯ ಸಮ್ಮೇಳನ ಒಂದಿಷ್ಟು ಸಾಹಿತ್ಯ ಗೋಷ್ಠಿ, ಸನ್ಮಾನ ಸಮಾರಂಭಗಳಿಗೆ ಮೀಸಲಾಗದೆ ಕನ್ನಡಿಗರ ಬದುಕಿನ, ಸ್ವಾಭಿಮಾನದ ಹಲವು ಪ್ರಶ್ನೆಗಳನ್ನು ಎತ್ತಿಕೊಳ್ಳುವಂತಹಾ, ಅವುಗಳಿಗೆ ಉತ್ತರ ಕಂಡುಕೊಳ್ಳುವ ವೇದಿಕೆಯಾದರೆ ಇಂತಹ ಸಮ್ಮೇಳನಗಳಿಗೊಂದು ಅರ್ಥವಿರುತ್ತದೆ. ಕರ್ನಾಟಕದ ಏಕೀಕರಣಕ್ಕಾಗೇ ಹುಟ್ಟಿದ, ಕನ್ನಡಿಗರನ್ನು ಒಗ್ಗೂಡಿಸಲು ಸರ್ ಎಂ.ವಿ. ಅವರ ಮುಂದಾಳತ್ವದಲ್ಲಿ ಶುರುವಾದ ಸಂಸ್ಥೆ ನಮ್ಮ ಸಾಹಿತ್ಯ ಪರಿಷತ್ತು. ಈ ಸಂಸ್ಥೆಯಿಂದ ಅಂತದ್ದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪೇನು ಅಲ್ಲ ಅಂತ ನನ್ನ ಅನಿಸಿಕೆ. ಏನಂತೀರಾ?

Share this Story:

Follow Webdunia kannada