Webdunia - Bharat's app for daily news and videos

Install App

ಕನ್ನಡ ಸಾಯುವ ಭಾಷೆಯಲ್ಲ; ಅಭಿಮಾನ ಬೇಕು:ಜಿ.ವಿ. ನುಡಿ

Webdunia
ಶುಕ್ರವಾರ, 4 ಫೆಬ್ರವರಿ 2011 (15:57 IST)
PR
' ಕನ್ನಡ ಸಾಯುತ್ತದೆ ಎಂಬ ಮಾತನ್ನು ಯಾರೂ ಆಡಬಾರದು. ಭಾಷಾ ಪಂಡಿತರು ತಯಾರು ಮಾಡಿರುವ ಅಂಕಿ-ಅಂಶಗಳಲ್ಲಿ ಪ್ರಪಂಚದ ಪ್ರಾಚೀನ ಪ್ರಸಿದ್ಧ, ಸಮೃದ್ಧ ಭಾಷೆಗಳ ಪಟ್ಟಿಯೊಂದು ಇದೆ. ಅಂಥ ಆರು ಸಾವಿರ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಮೊದಲ ಮೂವತ್ತು ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಸಾಯುವ ಭಾಷೆಯಲ್ಲ. ಅದು ಚಂದ್ರ ಸೂರ್ಯರಿರುವ ತನಕ ಬಾಳುವ ಭಾಷೆ'... ಇದು 77ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ 98ರ ಹರೆಯದ ಪ್ರೊ.ಜಿ.ವೆಂಕಟಸುಬ್ಬಯ್ಯನವರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿನ ನುಡಿಗಳು.

ಶುಕ್ರವಾರ ಉದ್ಯಾನಗರಿಯಲ್ಲಿನ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ 77ನೇ ಅಕ್ಷರ ಜಾತ್ರೆಯ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ನೆಲ, ಜಲ, ಭಾಷೆ, ಸಮಸ್ಯೆಗಳ ಕುರಿತು ತಮ್ಮ ಬಿಚ್ಚುನುಡಿಗಳನ್ನಾಡಿದ್ದಾರೆ.

ಕಾಲಮಾನದಲ್ಲಿ ಕನ್ನಡವೂ ಬದಲಾವಣೆಯನ್ನು ಹೊಂದುತ್ತದೆ. ನಾವು ಈ ಬದಲಾವಣೆಯ ಕಾಲದಲ್ಲಿ ಬಾಳುತ್ತಿದ್ದೇವೆ. ನಮ್ಮ ಹೊಸ ಶಬ್ದಸಂಪತ್ತಿನ ಪ್ರಭಾವದಿಂದ ಈಗಿರುವ ಕನ್ನಡ ಶಬ್ದ ಸಂಪತ್ತನ್ನು ಕಳೆದುಕೊಳ್ಳಬಾರದು ಎಂಬುದನ್ನು ನಾವು ತಿಳಿದಿರಬೇಕು ಎಂದರು.

ಬೆಂಗಳೂರಿನಲ್ಲಿ ಕನ್ನಡ ಉಳಿಯುತ್ತದೆಯೇ:
ಕನ್ನಡ ಭಾಷೆ ವಿಷಯದಲ್ಲಿ ಬೆಂಗಳೂರಿನ ಪ್ರಶ್ನೆಯೇ ಬೇರೆ. ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವುದು ಸಾಧ್ಯವೇ? ಬೆಂಗಳೂರಿನಲ್ಲಿರುವ ಕನ್ನಡಿಗರ ಜನಸಂಖ್ಯೆ ಈಗ ಶೇ.30ಕ್ಕೆ ಇಳಿದಿದೆ. ಇನ್ನೂ ಕಡಿಮೆಯಾಗುತ್ತಾ ಇದೆ. ತೆಲುಗು, ತಮಿಳು, ಹಿಂದಿ, ಉರ್ದು, ಮರಾಠಿ, ಗುಜರಾತಿ, ಬಂಗಾಳಿ, ಸಿಂಧಿ ಭಾಷೆಗಳು ಸ್ಪರ್ಧೆಯನ್ನು ಹೂಡುತ್ತಿವೆ. ಈ ಎಲ್ಲ ಭಾಷೆಗಳ ನಡುವೆ ಇಂಗ್ಲಿಷಿಗೆ, ಹಿಂದಿಗೆ ಅಧಿಕವಾದ ಸ್ಥಾನ ಸಿಕ್ಕಿದೆ. ಹೀಗಿರುವಾಗ ಈ ಬೃಹನ್ನಗರದಲ್ಲಿ ಕನ್ನಡವನ್ನು ಉಳಿಸಲು ಕೆಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಇಂಥ ಪ್ರಯತ್ನಗಳಿಂದ ಆಗುವ ಪ್ರತಿಫಲ ಕಡಿಮೆ. ಇದಕ್ಕಿಂತ ಹೆಚ್ಚಾಗಿ ತೀವ್ರವಾದ ಸಾರ್ವಜನಿಕ ಪ್ರಯತ್ನಗಳಾಗಬೇಕು ಎಂದು ಪ್ರೊ.ಜಿವಿ ಕರೆ ನೀಡಿದರು.

ಕನ್ನಡ ಸಾಯುವುದಿಲ್ಲ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಅದು ತನ್ನ ಪ್ರಥಮ ಸ್ಥಾನವನ್ನು ಕಳೆದುಕೊಳ್ಳಬಾರದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಅದನ್ನು ಸ್ಥಿರವಾಗಿ ಉಳಿಸಬೇಕು. ಕನ್ನಡ ನಾಡಿನ ಎಲ್ಲರೂ ಈ ಸ್ಥಿತಿಯನ್ನು ತೀವ್ರವಾಗಿ ಗಮನಿಸಬೇಕು ಎಂದು ಮನವಿ ಮಾಡಿಕೊಂಡರು.

ಐಟಿ-ಬಿಟಿಯಲ್ಲಿ ಕನ್ನಡಿಗರಿಗೆ ಆದ್ಯತೆ ಕಡಿಮೆ:
ರಾಜ್ಯದಲ್ಲಿರುವ ಐಟಿ, ಬಿಟಿ ಮೊದಲಾದ ಉದ್ಯಮಗಳು ಸಾವಿರಾರು ಜನರಿಗೆ ಉದ್ಯೋಗಗಳನ್ನು ನೀಡಿದೆ. ಇವರಲ್ಲಿ ಕನ್ನಡದ ಜನ ಕಡಿಮೆ, ಹೊರಗಿನವರು ಅಧಿಕ. ಹೀಗೆ ಹೊರಗಿನಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಉದ್ಯೋಗಿಗಳು ಕನ್ನಡವನ್ನು ಉತ್ಸಾಹದಿಂದ ಕಲಿಯುವಂತೆ ಮಾಡುವ ಕಾರ್ಯವನ್ನು ಎಲ್ಲ ಉದ್ಯಮಿಪತಿಗಳು ಮಾಡಲೇಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಹೀಗೆ ಕನ್ನಡ ಕಲಿತರೆ ಅವರು ನಮ್ಮ ಕನ್ನಡಿಗರೇ ಆಗುತ್ತಾರೆ. ಇದರಿಂದ ಸೌಹಾರ್ದ ಉಂಟಾಗುತ್ತದೆ ಎಂದು ನುಡಿದರು.

ಚೀನಾ ದೇಶ ಮಾದರಿಯಾಗಬೇಕು:
ಸ್ವಂತ ಭಾಷೆಯನ್ನು ರಕ್ಷಿಸುವ ಬೆಳೆಸುವ ರೀತಿಯಲ್ಲಿ ಚೀನಾ ದೇಶ ಮಾಡುತ್ತಿರುವ ಪ್ರಯತ್ನವು ಎಲ್ಲ ಭಾಷಿಕರಿಗೂ ಮಾದರಿಯಾಗಿದೆ. ಅಮೆರಿಕದಲ್ಲಿರುವ ಚೀನಾ ದೇಶಿಯರ ಮಕ್ಕಳಿಗೆ ಚೀನಾ ದೇಶದ ಆಡಳಿತ ಭಾಷೆಯಾಗಿರುವ 'ಮಂಡಾರಿನ್' ಭಾಷೆಯನ್ನು ಕಲಿಸುವ ಏರ್ಪಾಟನ್ನು ನಾವು ಪರಿಶೀಲಿಸಬೇಕು. ಅಮೆರಕದ ಚೀನಿ ಭಾಷೆಯ ಶಾಲೆಗಳಲ್ಲಿ ಕಿಂಡರ್‌ಗಾರ್ಟನ್ ಮತ್ತು ಪ್ರಥಮ ತರಗತಿಗಳಲ್ಲಿ ಪಾಠದ ಮಾಧ್ಯಮವು ಚೀನಿ ಭಾಷೆಯಲ್ಲಿಯೇ ನಡೆಯುತ್ತದೆ. ಎರಡನೇ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸುತ್ತಾರೆ. ಆರನೆಯ ತರಗತಿಯವರೆಗೆ ಅರ್ಧ ಚೀನಿ, ಅರ್ಧ ಇಂಗ್ಲಿಷ್ ಭಾಷೆಯಲ್ಲಿ ಪಾಠಗಳಾಗುತ್ತವೆ. ಅಲ್ಲಿಯೂ ಚೀನಿ ಆವರಣದಲ್ಲಿಯೇ ಪಾಠಗಳಾಗುತ್ತವೆ. ಇಲ್ಲಿಗೆ ಬರುವ ಅಧ್ಯಾಪಕರೆಲ್ಲ ತೈವಾನ್ ಅಥವಾ ಚೀನಿ ದೇಶದಿಂದಲೇ ಬರುತ್ತಾರೆ. ಪ್ರಾರಂಭದಲ್ಲಿ ಈ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವುದರಲ್ಲಿ ಹಿಂದೆ ಬಿದ್ದರೂ ಬರಬರುತ್ತಾ ಎರಡು ಭಾಷೆಗಳಲ್ಲಿಯೂ ಸ್ಪಷ್ಟವಾಗಿ ಮಾತನಾಡುತ್ತಾರೆ. ಹೀಗೆ ಅಮೆರಿಕದಲ್ಲಿ ಚೀನಾ ಶಾಲೆಗಳು ಜನಪ್ರಿಯವಾಗಿದೆ ಎಂದರು.

ಯುವ ಲೇಖಕರ ಆಕರ್ಷಕ ಭಾಷೆ: ಕನ್ನಡ ಸಾಹಿತ್ಯ ಲೋಕದ ಇತ್ತೀಚಿನ ದಶಮಾನಗಳಲ್ಲಿಯೂ ಬರುತ್ತಿರುವ ಯುವ ಲೇಖಕರ ಭಾಷೆಯಲ್ಲಿ ಹೊಸ ಬಗೆಯ ನವೀನತೆ ಎದ್ದು ಕಾಣುತ್ತಿದೆ. ವಾರ್ತಾ ಪತ್ರಿಕೆಯಲ್ಲಿ ಯುವ ಲೇಖಕರು ಬಳಸುವ ಭಾಷೆಯಲ್ಲಿ ಹತ್ತು ವರ್ಷಗಳ ಹಿಂದಿನ ಭಾಷೆಗಿಂತ ಪೂರ್ಣವಾಗಿ ಬದಲಾಯ ರೀತಿ ಎದ್ದು ಕಾಣುತ್ತಿದೆ. ಇದರಿಂದ ಹೊಸ ಆಕರ್ಷಕ ಶೈಲಿ ರೂಪುಗೊಳ್ಳುತ್ತಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಇಂದು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವಿಶೇಷವಾಗಿ ಕಲಿಯದಿದ್ದರೂ ಕನ್ನಡದಲ್ಲಿ ಲೇಖನಗಳನ್ನು ರಚಿಸುವವರನ್ನೂ, ಕವನ ಕಟ್ಟಿಕೊಡುವವರನ್ನೂ ನಾನು ಕಂಡಿದ್ದೇನೆ. ಅವರು ವೈದ್ಯರು, ತಂತ್ರಜ್ಞಾನಿಗಳು, ವಿಜ್ಞಾನಿಗಲು ಹೀಗೆ. ಅವರಿಗೆ ಉತ್ಸಾಹವಿದೆ, ದಟ್ಟವಾದ ಅರಿವಿಲ್ಲ. ಅಂಥವರ ಬರಹದಲ್ಲಿ ಸಾಮರ್ಥ್ಯ ಹೆಚ್ಚಬೇಕಾದರೆ ಹಳಗನ್ನಡದ ಹಿನ್ನೆಲೆ ಸ್ವಲ್ಪ ಇರಬೇಕು ಎಂದು ಸಲಹೆ ನೀಡಿದರು.

ಕೆಲವರು ಮಹಿಳೆಯರ ಬರಹಗಳಲ್ಲಿ, ಇದು ಪುರುಷರು ಬಳಸಲಾಗದ ಶೈಲಿ ಎಂಬಷ್ಟು ವ್ಯತ್ಯಾಸವನ್ನು ನಾನು ಪರಿಗಣಿಸಿದ್ದೇನೆ. ಪ್ರಸಿದ್ಧರಾದ ಕೆಲವರು ಮಹಿಳೆಯರು ಅವರದೇ ಆದ ಶಬ್ದ ಸಮುದಾಯಗಳನ್ನು ರೂಪಿಸಿಕೊಂಡಿದ್ದಾರೆ. ಇದರಲ್ಲಿಯೂ ಒಂದು ಹೊಸತನವಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಶತಮಾನದ ಕೃಷಿಯಿಂದ ಕನ್ನಡ ನೆಲ ಎಷ್ಟು ಫಲವತ್ತಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯ ಬರುತ್ತಿದೆ. ಮುಂದೆ ಬರುವ ಸಾಹಿತ್ಯಕ್ಕೆ ಬೇಕಾದ ಎಲ್ಲ ಹಿನ್ನೆಲೆಯನ್ನೂ ಈ ಶತಮಾನ ಸೃಷ್ಟಿಸಿದೆ. ನಾವಿನ್ನು ಹೊಸದಕ್ಕೆ ದಾರಿ ಮಾಡೋಣ. ಬರುವುದನ್ನು ಪ್ರೀತಿಯಿಂದ ನಿರೀಕ್ಷಿಸೋಣ ಎಂದು ಪ್ರೊ.ಜಿವಿ ಹೇಳಿದರು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments