ನೆಂಟರ ಮದುವೆಗೆ ಬಂದಿದ್ದ ಸಂತಾ ಎಲ್ಲರೊಂದಿಗೆ ಊಟಕ್ಕೆ ಕೂತಿದ್ದ, ಅಡಿಗೆಯವರು ಊಟ ಬಡಿಸುತ್ತಾ ಬಂದರು. ಆದರೆ ಎಲ್ಲರ ಎಲೆಗೂ ಬಿದ್ದ ಜಿಲೇಬಿ ಸಂತಾನ ಎಲೆಗೆ ಬೀಳಲೇ ಇಲ್ಲಾ. ಜಿಲೇಬಿಯೆಂದರೆ ಸಂತಾನಿಗೆ ಮೊದಲೇ ಪ್ರಾಣ. ಕೇಳಿ ಬಡಿಸಿಕೊಳ್ಳಲು ಸಂಕೋಚ ಅಡ್ಡಿ! ವಧುವಿನ ತಂದೆ ಎಲ್ಲರನ್ನೂ ವಿಚಾರಿಸಿಕೊಳ್ಳುತ್ತಾ ಬಂದರು. ತಟ್ಟನೆ ಸಂತಾನ ತಲೆ ಓಡಿತು. ಕೂಡಲೇ ಅವರಿಗೆ ಕೇಳಿದ. "ಇಲ್ಲಿ ಬಾಂಬ್ ಬಿದ್ದರೆ ನಿಮ್ಮೆಲ್ಲರ ಗತಿ ಏನಾದೀತು?" ಅದಕ್ಕೆ "ನಮ್ಮೆಲ್ಲರ ಮೇಲೆ ಬಿದ್ದ ಬಾಂಬ್ ನಿನ್ನ ಮೇಲೆ ಬೀಳುವುದಿಲ್ಲವೇ?" ವಧುವಿನ ತಂದೆ ನಗುತ್ತಾ ಕೇಳಿದಾಗ, ಸಂತಾ "ಹೇಗೆ ಬಿದ್ದೀತು? ಇಲ್ಲಿ ಎಲ್ಲರ ಎಲೆಗೆ ಬಿದ್ದ ಜಿಲೇಬಿ ನನ್ನ ಎಲೆಗೆ ಬಿತ್ತೇನು?" ಕೂಡಲೇ ಸಂತಾನ ಎಲೆಗೆ ಜಿಲೇಬಿ ಬಿತ್ತು!!