ಭಾರತದ ಮೇಲೆ ಉಗ್ರಗಾಮಿ ದಾಳಿ ನಡೆಸಲು ಸಂಚುಹೂಡಿದ್ದ ಶಂಕಿತ ಲಷ್ಕರೆ ಉಗ್ರ ಡೇವಿಡ್ ಹೆಡ್ಲಿಯ ವಿಚಾರಣೆ ಡಿಸೆಂಬರ್ 4ರಂದು ಇಲ್ಲಿನ ನ್ಯಾಯಾಲಯ ಒಂದರಲ್ಲಿ ನಿಗದಿಯಾಗಿದ್ದು ಅದೀಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
"ಡೇವಿಡ್ ಕೋಲ್ಮನ್ ಹೆಡ್ಲಿಯ ಪ್ರಾಥಮಿಕ ವಿಚಾರಣೆಯು ಚಿಕಾಗೋದ ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ನಿಗದಿಯಾಗಿದ್ದು, ಅದು ರದ್ದಾಗಿದ್ದು ನಿಗದಿಯಂತೆ ನಡೆಯುತ್ತಿಲ್ಲ. ಈ ಕುರಿತು ಹೊಸ ದಿನಾಂಕ ಅಥವಾ ಹೆಚ್ಚಿನ ಮಾಹಿತಿ ಈ ಸಂದರ್ಭದಲ್ಲಿ ಲಭ್ಯವಿಲ್ಲ" ಎಂಬುದಾಗಿ ಅಮರಿಕ ಅಟಾರ್ನಿ ಕಚೇರಿಯು ಘೋಷಿಸಿದೆ.
ಇದೇವೇಳೆ, ಹೆಡ್ಲಿ ಜತೆ ಬಂಧನಕ್ಕೀಡಾಗಿರುವ ಇನ್ನೋರ್ವ ಉಗ್ರ ತಹವೂರ್ ರಾಣಾನ ವಿಚಾರಣೆಯು ಡಿಸೆಂಬರ್ 2ರಂದು ನಿಗದಿಯಾಗಿದ್ದು, ಅದು ಮ್ಯಾಜಿಸ್ಟ್ರೇಟ್ ನಾನ್ ನೋಲನ್ ಎದುರು ನಡೆಯಲಿದೆ ಎಂಬುದಾಗಿ ಅಟಾರ್ನಿ ಕಚೇರಿ ಮೂಲಗಳು ತಿಳಿಸಿವೆ.