ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ಯುಪಿಎ ಸರಕಾರವನ್ನು ಅಭಿನಂದಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್, ಐತಿಹಾಸಿಕ ಭಾರತ ಅಮೆರಿಕ ಪರಮಾಣು ಒಪ್ಪಂದವನ್ನು ಮುಂದುವರಿಸುವಲ್ಲಿ ಯುಪಿಎ ಸರಕಾರದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಸಿಂಗಾಪುರದಲ್ಲಿನ ಏಷ್ಯಾ ಸಚಿವರ ಸಭೆಯಲ್ಲಿ ವಿದೇಶಾಂಗ ರಾಜ್ಯ ಸಚಿವ ಆನಂದ್ ಶರ್ಮಾ ಅವರನ್ನು ಭೇಟಿ ಮಾಡಿದ ರೈಸ್, ಒಪ್ಪಂದ ಮುಂದುವರಿಕೆಯಲ್ಲಿನ ಯುಪಿಎ ನಾಯಕರ ಪ್ರಯತ್ನವು ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.
ನಾಗರಿಕ ಪರಮಾಣು ಸಹಕಾರ ಒಪ್ಪಂದದ ಕುರಿತಾದ ಸಂಪೂರ್ಣ ವಿವರಗಳನ್ನು ರೈಸ್ ಅವರು ಆನಂದ್ ಶರ್ಮ ಜೊತೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಯುಪಿಎ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ನಂತರ, ಪರಮಾಣು ವಾಣಿಜ್ಯ ರಿಯಾಯಿತಿಯನ್ನು ಪಡೆಯುವ ನಿಟ್ಟಿನಲ್ಲಿ 45 ಪರಮಾಣು ಪೂರೈಕೆ ರಾಷ್ಟ್ರಗಳೊಂದಿಗೆ ಮತ್ತು ಐಎಇಎಯೊಂದಿಗೆ ಮಾತುಕತೆಯನ್ನು ತ್ವರಿತವಾಗಿ ನಡೆಸಲಿದೆ ಎಂದು ಅಮೆರಿಕವು ತಿಳಿಸಿದೆ.