ಸ್ಯಾನ್ ಫ್ರಾನ್ಸಿಸ್ಕೊ: ಸಂಗೀತ ಲೋಕದ ಅಪ್ರತಿಮ ಸಾಧಕ, ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ತಮ್ಮ 73 ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಿನ್ನೆಯೇ ಅವರಿಗೆ ಹೃದಯಾಘಾತವಾದ ಸುದ್ದಿ ಬಂದಿತ್ತು. ಆದರೆ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಕುಟುಂಬಸ್ಥರು ಸಾವನ್ನಪ್ಪಿಲ್ಲ, ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು.
ಆದರೆ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರೇ ಸ್ಪಷ್ಟಪಡಿಸಿದ್ದಾರೆ. ಅಮೆರಿಕಾದಲ್ಲಿದ್ದ ಅವರು ತೀವ್ರ ರಕ್ತದೊತ್ತಡ, ಹೃದಯ ಸಂಬಂಧೀ ಖಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕೆ ಎರಡು ವಾರಗಳಿಂದ ಅಮೆರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದೀಗ ಮೃತಪಟ್ಟಿರುವ ದುಃಖದ ವಾರ್ತೆ ಕೇಳಿಬಂದಿದೆ. 1951 ರಲ್ಲಿ ಜನಿಸಿದ್ದ ಜಾಕೀರ್ ಹುಸೇನ್ ಚಿಕ್ಕ ವಯಸ್ಸಿನಿಂದಲೂ ಸಂಗೀತ ವಾತಾವರಣದಲ್ಲೇ ಬೆಳೆದವರು. ಅವರು ತಬಲಾ ಹಿಡಿದರೆ ಜನ ಮಂತ್ರಮುಗ್ಧರಾಗಿ ವೀಕ್ಷಿಸುತ್ತಿದ್ದರು. ಅವರ ಕೈಗಳು ಚುರುಕಾಗಿ ಓಡುತ್ತಿದ್ದರೆ ತಬಲಾದಿಂದ ಅದ್ಭುತ ತಾಳ ಸೃಷ್ಟಿಯಾಗುತ್ತಿತ್ತು. ಭಾರತದ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದರು. ಅವರ ನಿಧನಕ್ಕೆ ಸಂಗೀತ ಲೋಕ ಕಂಬನಿ ಮಿಡಿಯುತ್ತಿದೆ.