ಪ್ಯಾರಿಸ್ : ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಶಿರವಸ್ತ್ರ ಧರಿಸಿದರೆ (ಹಿಜಬ್) ದಂಡ ಹಾಕಲಾಗುವುದು ಎಂದು ಫ್ರೆಂಚ್ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಪ್ರತಿಜ್ಞೆ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿ ಇರುವ ಹೊತ್ತಿನಲ್ಲೇ ಪೆನ್ ಈ ಹೇಳಿಕೆ ನೀಡಿದ್ದಾರೆ. ಮತ ಬೇಟೆಗಾಗಿ ಅಭ್ಯರ್ಥಿಗಳು ಕೊನೆ ಹಂತದ ಪ್ರಚಾರದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆಯಿದ್ದರೂ, ಅಂತಿಮ ಹಂತದಲ್ಲಿ ಲೆ ಪೆನ್ ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ.
ಫ್ರಾನ್ಸ್ನ ಬಲ ಮತ್ತು ಎಡಪಂಥೀಯ ಪಕ್ಷಗಳು ಚುನಾವಣೆ ಸಮರವನ್ನು ಎದುರಿಸುತ್ತಿವೆ. ಎಡಪಂಥೀಯ ಅಭ್ಯರ್ಥಿ ಜೀನ್-ಲುಕ್ ಮೆಲೆನ್ಚೋನ್ ಮೂರನೇ ಸ್ಥಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ.