ದೆಹಲಿ: ವಾಟ್ಸಪ್ ಗೋಪ್ಯತಾ ನೀತಿಯನ್ನು ತಡೆ ಹಿಡಿಯುವುದಾಗಿ ದೆಹಲಿ ಹೈಕೋರ್ಟ್ಗೆ ವಾಟ್ಸಪ್ ಶುಕ್ರವಾರ ತಿಳಿಸಿದೆ. ವಾಟ್ಸಪ್ ತಂದಿರುವ ಈ ಗೋಪ್ಯತಾ ನೀತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಈ ಮೊದಲು ಇದೇ ನೀತಿಯನ್ನು ತರಲು ಹೊರಟು ಸಾಕಷ್ಟು ವಿರೋಧಗಳನ್ನು ಎದುರಿಸಿದ ನಂತರ ವಾಪಸ್ ಪಡೆದುಕೊಂಡಿತ್ತು. ಮತ್ತೆ ಈ ನೀತಿಯನ್ನು ತರಲು ಹೊರಟ ವಾಟ್ಸಪ್ ತಾತ್ಕಾಲಿಕವಾಗಿ ಹಿಂದೆ ಸರಿದಿದೆ.
ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ವೈಯಕ್ತಿಕ ಮಾಹಿತಿ ರಕ್ಷಣಾ ಮೂಸೂದೆ - 2019 ಜಾರಿಗೆ ಬರುವವರೆಗೆ ವಿವಾದಕ್ಕೆ ಕಾರಣವಾಗಿರು ಈ ನೀತಿಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದೆ.ಈ ಕುರಿತು ವಾಟ್ಸಪ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ಜ್ಯೋತಿ ಸಿಂಗ್ ಅವರುಗಳು ಇದ್ದ ಪೀಠದ ಎದುರು ಶುಕ್ರವಾರ ಮಾಹಿತಿ ನೀಡಿದ್ದಾರೆ.