ನವ ದೆಹಲಿ (ಜುಲೈ 04); ಕೊರೋನಾ ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರ ಲಸಿಕೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈಗಾಗಲೇ ಲಸಿಕೆ ನಿಡುವ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಎಲ್ಲೆಡೆ ಯಶಸ್ವಿಯಾಗಿ ಜನರಿಗೆ ಲಸಿಕೆ ನೀಡಲಾಗುತ್ತಿದೆ.
ಆದರೆ, ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ( ICMR-Indian Council of Medical Research) ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಒಂದು ಮಹತ್ವದ ಅಧ್ಯಯನವನ್ನು ನಡೆಸಿದ್ದು, "ಕೊರೋನಾ ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದವರು ಕೊರೋನಾದಿಂದ ಶೀಘ್ರದಲ್ಲೇ ಚೇತರಿಸಿಕೊಂಡಿದ್ದಾರೆ ಮತ್ತು ಡೆಲ್ಟಾ ರೂಪಾಂತರದ ವಿರುದ್ಧ ತುಲನಾತ್ಮಕವಾಗಿ ಹೆಚ್ಚಿನ ರಕ್ಷಣೆಯನ್ನು ಹೊಂದಿದ್ದಾರೆ" ಎಂಬುದನ್ನು ಸಂಶೋಧನೆ ಮೂಲಕ ಕಂಡುಹಿಡಿದಿದ್ದಾರೆ.
ಐಸಿಎಂಆರ್ ಅಧ್ಯಯನದ ಪ್ರಕಾರ, ಲಸಿಕೆ ಪಡೆದ ನಂತರದ ಫಲಿತಾಂಶದಲ್ಲಿ ಸೋಂಕಿನ ವಿರುದ್ಧ ಹೋರಾಟದಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಅಲ್ಲದೆ, ಸೆಲ್ಯುಲಾರ್ ರೋಗನಿರೋಧಕ ಪ್ರತಿಕ್ರಿಯೆಯು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಕ್ಕೆ ಪುರಾವೆ ನೀಡುತ್ತದೆ ಎಂದು ತಿಳಿದುಬಂದಿದೆ.