ವಾಷಿಂಗ್ಟನ್: ಪ್ರಧಾನಿ ಮೋದಿ ಅಮೆರಿಕಾಗೆ ತೆರಳುವ ಕೆಲವೇ ದಿನಗಳ ಮೊದಲು ಭಾರತೀಯ ವಲಸಿಗರನ್ನು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಿಂದ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೇ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರನ್ನು ದೇಶದಿಂದ ಗಡೀಪಾರು ಮಾಡುವ ಪ್ರಕ್ರಿಯೆ ಶುರು ಮಾಡಿದ್ದರು. ಅದರಂತೆ ಸಾಕಷ್ಟು ಭಾರತೀಯರು ಸೇರಿದಂತೆ ವಿವಿಧ ದೇಶಗಳ ಅಕ್ರಮ ವಲಸಿಗರು ಅಮೆರಿಕಾದಿಂದ ಗಡೀಪಾರಾಗುವ ಭೀತಿಯಲ್ಲಿದ್ದರು. ಫೆಬ್ರವರಿ ಎರಡನೇ ವಾರದಲ್ಲಿ ಮೋದಿ ಅಮೆರಿಕಾಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಅದರ ಬೆನ್ನಲ್ಲೇ ಈಗ ಭಾರತೀಯರ ಗಡೀಪಾರು ಪ್ರಕ್ರಿಯೆ ಆರಂಭವಾಗಿದೆ.
ಇದೀಗ ಭಾರತೀಯರನ್ನೂ ಗಡೀಪಾರು ಮಾಡಲು ಶುರು ಮಾಡಲಾಗಿದ್ದು, ಇಂದು ಗಡೀಪಾರಾಗಿರುವ ಭಾರತೀಯರನ್ನೊಳಗೊಂಡ ವಿಮಾನ ಭಾರತಕ್ಕೆ ಬಂದಿಳಿಯಲಿದೆ. ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತದತ್ತ ಈಗಾಗಲೇ ಹೊರಟಿದೆ.
ಅಮೆರಿಕಾದಿಂದ ಗಡೀಪಾರಾಗಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆಸಿಕೊಳ್ಳಲು ಕಾನೂನು ಪ್ರಕಾರವಾಗಿ ಏನು ಮಾಡಬಹುದೋ ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಮೂಲಗಳ ಪ್ರಕಾರ ಅಮೆರಿಕಾದಲ್ಲಿ ಸರಿ ಸುಮಾರು 7 ಲಕ್ಷಕ್ಕೂ ಅಧಿಕ ಭಾರತೀಯ ಅಕ್ರಮ ವಲಸಿಗರಿದ್ದಾರೆ.