ವಾಷಿಂಗ್ಟನ್: 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಅಫ್ಗಾನಿಸ್ತಾನದಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ನಿರ್ಧಾರ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಅಮೆರಿಕದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯುದ್ಧದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಬೈಡನ್ ಹೇಳಿದ್ದಾರೆ.
'ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಾಗ ಈ ಯುದ್ಧವನ್ನು ಕೊನೆಗೊಳಿಸುವುದಾಗಿ ಅಮೆರಿಕದ ಜನರಿಗೆ ಭರವಸೆಯನ್ನು ಕೊಟ್ಟಿದ್ದೇನೆ. ನಾನು ಆ ಬದ್ಧತೆಯನ್ನು ಗೌರವಿಸುತ್ತೇನೆ ' ಎಂದು ಹೇಳಿದ್ದಾರೆ.
'ಜಗತ್ತು ಬದಲಾಗುತ್ತಿದ್ದು, ಅಮೆರಿಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಚೀನಾದಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ರಷ್ಯಾದಿಂದಲೂ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆ ಎದುರಾಗಿದೆ. ಸೈಬರ್ ದಾಳಿ ಮತ್ತು ಪರಮಾಣು ಪ್ರಸರಣದ ಸವಾಲುಗಳು ನಮ್ಮ ಮುಂದಿದೆ' ಎಂದು ಹೇಳಿದ್ದಾರೆ.