ಬೀಜಿಂಗ್ : ಹಾಂಕಾಂಗ್ನ ಪ್ರಸಿದ್ಧ ಜಂಬೋ ರೆಸ್ಟೋರೆಂಟ್ ಚೀನಾದ ದಕ್ಷಿಣ ಭಾಗದ ಸಮುದ್ರದಲ್ಲಿ 1,000 ಅಡಿಗೂ ಅಧಿಕ ಆಳಕ್ಕೆ ಮುಳುಗಿ ಹೋಗಿದೆ.
46 ವರ್ಷಗಳಿಂದ ಒಂದೇ ನೆಲೆಯಲ್ಲಿದ್ದ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಟಗ್ಬೋಟ್ ಸಹಾಯದಿಂದ ಎಳೆದುಕೊಂಡು ಹೋಗಲಾಗಿತ್ತು.
ಈ ಸಂದರ್ಭ ದಕ್ಷಿಣ ಚೀನಾ ಸಮುದ್ರದ ಭಾರೀ ಅಲೆಯ ಕಾರಣ ಜಂಬೋ ರೆಸ್ಟೋರೆಂಟ್ ಮಗುಚಿ ಬಿದ್ದಿದೆ. ಅದನ್ನು ನೀರಿನಿಂದ ಮೇಲೆತ್ತುವುದು ಅತ್ಯಂತ ಕಷ್ಟಕರವಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ತೇಲುವ ರೆಸ್ಟೋರೆಂಟ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಂಬೋ, ಅನೇಕ ಹಾಂಕಾಂಗ್ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರಗಳಲ್ಲೂ ಕಾಣಿಸಿಕೊಂಡಿತ್ತು.
ಈ ರೆಸ್ಟೋರೆಂಟ್ನಲ್ಲಿ ಎರಡನೇ ರಾಣಿ ಎಲಿಜಬೆತ್, ಜಿಮ್ಮಿ ಕಾರ್ಟರ್, ಟಾಮ್ ಕ್ರೂಸ್ ಸೇರಿದಂತೆ ಹಲವು ಗಣ್ಯರಿಗೆ ಆತಿಥ್ಯ ನೀಡಲಾಗಿತ್ತು. ಭವ್ಯವಾದ ಗೋಪುರ, ವರ್ಣರಂಜಿತ ಚಿತ್ರ, ಚೈನೀಸ್ ಭಾಷೆಯ ಸಾಲುಗಳಿಂದ ಜಂಬೋ ಪ್ರಸಿದ್ಧವಾಗಿತ್ತು.
2013ರ ಸಮಯ ಚೀನಾದ ದಕ್ಷಿಣ ಭಾಗದಲ್ಲಿ ಮೀನುಗಾರಿಕೆ ಹಾಗೂ ಜನಸಂಖ್ಯೆ ಕ್ಷೀಣಿಸಿದ ಕಾರಣ ಜಂಬೋ ತನ್ನ ಪ್ರಸಿದ್ಧಿಯನ್ನು ನಿಧಾನವಾಗಿ ಕಳೆದುಕೊಂಡಿತು.