Publish Date: Tue, 17 Mar 2026 (13:21 IST)
Updated Date: Tue, 17 Mar 2026 (13:23 IST)
ನ್ಯೂಯಾರ್ಕ್: ಇರಾನ್ ವಿರುದ್ಧದ ಯುದ್ಧದಲ್ಲಿ ಎಲ್ಲಾ ಮಿತ್ರರಾಷ್ಟ್ರಗಳು ಕೈ ಕೊಟ್ಟ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಾಂಗಿಯಾಗಿದ್ದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹೊರ್ಮುಜ್ ಜಲಸಂಧು ತೆರವಿಗೆ ಫ್ರಾನ್ಸ್, ಚೀನಾ, ಜಪಾನ್, ಆಸ್ಟ್ರೇಲಿಯಾ, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಯುದ್ಧ ನೌಕೆಗಳನ್ನು ಕಳುಹಿಸಲು ಟ್ರಂಪ್ ಮನವಿ ಮಾಡಿದ್ದರು. ಆದರೆ ಈ ಎಲ್ಲಾ ರಾಷ್ಟ್ರಗಳೂ ಅಮೆರಿಕಾದ ಮನವಿಯನ್ನು ತಿರಸ್ಕರಿಸಿವೆ.
ನಿಮ್ಮ ಹುಚ್ಚಾಟಗಳಿಗೆ ನಾವು ಬರಲ್ಲ ಎಂದು ಫ್ರಾನ್ಸ್, ಜರ್ಮನಿ, ಜಪಾನ್, ಇಂಗ್ಲೆಂಡ್ ಸೇರಿ ಪ್ರಮುಖ ದೇಶಗಳೇ ಖಡಕ್ ಸಂದೇಶ ರವಾನಿಸಿದೆ. ಇದರಿಂದ ಡೊನಾಲ್ಡ್ ಟ್ರಂಪ್ ಈಗ ಏಕಾಂಗಿಯಾಗಿದ್ದಾರೆ. ಇದರ ಬೆನ್ನಲ್ಲೇ ಅವರು ಇರಾನ್ ಈ ಮಟ್ಟಿಗೆ ದಾಳಿ ನಡೆಸಬಹುದು ಎಂದು ನಾವು ಊಹಿಸಿರಲಿಲ್ಲ ಎಂದಿದ್ದಾರೆ.
ಇಷ್ಟು ದಿನ ತಾನು ಆಡಿದ್ದೇ ಆಟ ಎಂಬಂತಿದ್ದ ಟ್ರಂಪ್ ಗೆ ಈಗ ಮಿತ್ರರಾಷ್ಟ್ರಗಳು ಕೈ ಕೊಟ್ಟಿರುವುದು ಮುಖಭಂಗವಾದಂತಾಗಿದೆ. ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಅವರು ಇರಾನ್ ಈ ಪರಿ ಪ್ರತಿದಾಳಿ ಮಾಡಬಹುದು ಎಂದು ನಾವು ಅಂದುಕೊಂಡಿರಲಿಲ್ಲ. ಕತಾರ್, ಯುಎಇ, ದುಬೈ ಮೇಲೆ ದಾಳಿ ನಡೆಸಿದೆ. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ನಾವು ಜಪಾನ್, ಇಂಗ್ಲೆಂಡ್ ಸೇರಿದಂತೆ ಮಿತ್ರರಾಷ್ಟ್ರಗಳಲ್ಲಿ ನ್ಯಾಟೋ ಪಡೆ ಕಟ್ಟಿಕೊಂಡಿದ್ದೆವು. ಆದರೆ ಅವು ಯಾವುವೂ ಈಗ ನಮ್ಮ ನೆರವಿಗೆ ಬರುತ್ತಿಲ್ಲ. ಇದನ್ನು ನಾನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ ಎಂದು ಟ್ರಂಪ್ ಅಸಹಾಯಕತೆ ಜೊತೆಗೆ ಮಿತ್ರರಾಷ್ಟ್ರಗಳಿಗೆ ಪರೋಕ್ಷವಾಗಿ ಬೆದರಿಕೆ ಹಾಕುವ ಯತ್ನ ಮಾಡಿದ್ದಾರೆ.