ವಾಷಿಂಗ್ಟನ್:ಎರಡು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಷಿಂಗ್ಟನ್ ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಕೋರಲಾಯಿತು. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಿದ್ದು, ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಇಂದು ಭಾರತೀಯ ಮೂಲದವರ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ , ನಾಳೆ ಟ್ರಂಪ್ ಅವರೊಂದಿಗೆ ಹಲವು ವಿಚಾರಗಳ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಬಳಿಕ ಟ್ರಂಪ್ ಅವರೊಂದಿಗೆ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ ಅಮೆರಿಕಾ ಭೇಟಿಯನ್ನು ಸ್ವಾಗತಿಸಿರುವ ಡೊನಾಲ್ಡ್ ಟ್ರಂಪ್, ಭಾರತ ಅಮೆರಿಕಾದ ನಿಜವಾದ ಗೆಳೆಯ ಎಂದು ಬಣ್ಣಿಸಿದ್ದಾರೆ. ಇನ್ನು ಉಭಯ ದೇಶಗಳ ನಾಯಕರು ಎಚ್1 ಬಿ ವೀಸಾ ಬದಲಾವಣೆ ನಿಯಮಗಳು, ಉಗ್ರವಾದಕ್ಕೆ ಕಡಿವಾಣ, ನಾಗರಿಕ ಪರಮಾಣು ಒಪ್ಪಂದ,ಚೀನಾ ಪ್ರಾಬಲ್ಯಕ್ಕೆ ಕಡಿವಾಣ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.