Publish Date: Mon, 02 Mar 2026 (09:05 IST)
Updated Date: Mon, 02 Mar 2026 (09:08 IST)
ನವದೆಹಲಿ: ಇಸ್ರೇಲ್-ಇರಾನ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಜಮಿನ್ ನೆತನ್ಯಾಹುಗೆ ಕರೆ ಮಾಡಿದ ಪ್ರಧಾನಿ ಮೋದಿ ಯುದ್ಧ ನಿಲ್ಲಿಸಲು ಮನವಿ ಮಾಡಿದ್ದಾರೆ.
ಇಸ್ರೇಲ್, ಇರಾನ್, ಅಮೆರಿಕಾ ನಡುವೆ ನಡೆಯುತ್ತಿರುವ ಯುದ್ಧದ ತೀವ್ರತೆ ಹೆಚ್ಚುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗ ಜನರು ಭಯಭೀತರಾಗಿದ್ದಾರೆ. ಭಾರತೀಯರೂ ವಿದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ, ಅನೇಕ ಜನ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ಯುದ್ಧ ಇನ್ನಷ್ಟು ದಿನ ಮುಂದುವರಿದರೆ ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳ ಮೇಲೆ ಆರ್ಥಿಕವಾಗಿಯೂ ಪರಿಣಾಮ ಬೀರಲಿದೆ. ವಿಶೇಷವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸಾಗಣಿಕೆ ಕಷ್ಟವಾಗಲಿದೆ. ಇದರಿಂದ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ತೈಲ ಬೆಲೆ ಗಗನಕ್ಕೇರಲಿದೆ.
ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿಗೆ ಆಪ್ತರಾಗಿರುವ ಭಾರತದ ಪ್ರಧಾನಿ ಮೋದಿ ಕರೆ ಮಾಡಿ ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಜೊತೆ ಭಾರತದ ಕಳವಳಗಳನ್ನು ತಿಳಿಸಿದ್ದೇನೆ. ನಮ್ಮ ನಾಗರಿಕರ ಸುರಕ್ಷತೆ ನಮ್ಮ ಆದ್ಯತೆಯಾಗಿರಲಿದೆ. ಯುದ್ಧವನ್ನು ಬೇಗನೇ ನಿಲ್ಲಿಸುವ ಅಗತ್ಯದ ಬಗ್ಗೆ ಹೇಳಿದ್ದೇನೆ ಎಂದಿದ್ದಾರೆ.