ಮಾಸ್ಕೊ: ರಷ್ಯಾದ ವಿಮಾನ ಪೂರ್ವ ಅಮುರ್ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಆರು ಸಿಬ್ಬಂದಿ ಸೇರಿ ಒಟ್ಟು 50 ಮಂದಿ ಸಾವನ್ನಪ್ಪಿದ್ದಾರೆ.
ಈ ಪ್ಯಾಸೇಂಜರ್ ವಿಮಾನದಲ್ಲಿ ಆರು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿ 50 ಮಂದಿ ಇದ್ದರು. ಸೈಬೀರಿಯಾದ ಅಂಗಾರ ಎಂಬ ವಿಮಾನಯಾನ ಸಂಸ್ಥೆ ನಿರ್ವಹಣೆಯ ಎಎನ್-24 ಸಂಖ್ಯೆಯ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು. ಅದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಬೆಳಗ್ಗೆ 7.30ರ ಸುಮಾರಿಗೆ ಖಬರೋವ್ಸ್ಕ್‌ನಿಂದ ವಿಮಾನ ಹೊರಟಿತ್ತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಹೇಳಿದೆ. ಆದ್ರೆ ಅಧಿಕೃತವಾಗಿ ಸಾವನ್ನಪ್ಪಿರುವುದು ಬಹಿರಂಗವಾಗಿಲ್ಲ.
ಈ ನಡುವೆ ವಿಮಾನದ ಅವಶೇಷಗಳನ್ನು ರಕ್ಷಣಾ ಹೆಲಿಕಾಪ್ಟರ್‌ಗಳು ಪತ್ತೆ ಹಚ್ಚಿರುವುದಾಗಿ ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ. ಟಿಂಡಾದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ, ಇಳಿಜಾರಿನಲ್ಲಿ ಆನ್ -24 ವಿಮಾನದ ಅವಶೇಷಗಳು ಕಂಡುಬಂದಿವೆ. ವಿಮಾನ ಸಂಪೂರ್ಣವಾಗಿ ನಾಶವಾಗಿದೆ.