ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ದೇವರಿಗೆ ಮೋದಿ ಹಾಗೂ ಅಮಿತ್ ಶಾ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುದ್ದಿಯಾಗಿದ್ದಾರೆ.
ಅಮೆರಿಕ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಶಿ, ನಕ್ಷತ್ರಗಳನ್ನು ಹೇಳಿ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಪೂಜೆ ಸಲ್ಲಿಸಿದ್ದಾರೆ.
ಅದಲ್ಲದೆ ಈ ವೇಳೆ ಪಹಲ್ಗಾಮ್ ದಾಳಿಯ ನಂತರ ದೇಶದ ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲು ಅವರು ಪ್ರಾರ್ಥನೆ ಮಾಡಿದ್ದಾರೆ. ಅಮೆರಿಕಾದ ಫೀನಿಕ್ಸ್ ಮಹಾನಗರದಲ್ಲಿರುವ ಕೃಷ್ಣಮಂದಿರದಲ್ಲಿ ಅಣ್ಣಾಮಲೈ ಪೂಜೆ ಸಲ್ಲಿಸಿದ್ದಾರೆ.
ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಅಣ್ಣಾಮಲೈ ಈ ವೇಳೆ ಕಾರ್ಯಕ್ರಮ ಸಂಯೋಜಕರ ಬಳಿ ಮಾಹಿತಿ ಪಡೆದು ಕೃಷ್ಣ ಮಂದಿರ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ಮಂದಿರ ಅಮೆರಿಕದಲ್ಲಿದೆ. ಈ ದೇವಾಲಯದ ವೈಭವ ಹಾಗೂ ಪೂಜಾ ಶೈಲಿಯನ್ನು ಕೊಂಡಾಡಿದ ಅಣ್ಣಾಮಲೈ ಪೂಜೆ ಸಲ್ಲಿಸಿದ ಬಳಿಕ ಪ್ರಸಾದ ಸ್ವೀಕರಿಸಿದ್ದಾರೆ.