ವಾಷಿಂಗ್ಟನ್,ಆ.20: ಕೊರೊನಾ ಲಸಿಕೆ ಪಡೆದಿದ್ದರೂ ಮೂವರು ಸಂಸದರಿಗೆ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಅಮೆರಿಕಾದಲ್ಲಿ ಮತ್ತೆ ಡೆಲ್ಟಾ ರೂಪಾಂತರಿ ವೈರಾಣು ಅಬ್ಬರಿಸುವ ಸಾಧ್ಯತೆಗಳು ಗೋಚರಿಸತೊಡಗಿದೆ.
ಕಳೆದ ವಾರ ರಾತ್ರಿಯಿಡಿ ನಡೆದ ಸಂಸತ್ ಕಲಾಪದಲ್ಲಿ ಬಹುತೇಕ ಸಂಸದರೂ ಪಾಲ್ಗೊಂಡಿದ್ದರು. ಕಲಾಪದಲ್ಲಿ ಪಾಲ್ಗೊಂಡಿದ್ದ ಮೂವರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಸೋಂಕು ಇತರರಿಗೂ ಹರಡಿರುವ ಸಾಧ್ಯತೆಗಳಿವೆ.
ನಮಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ತಪಾಸಣೆ ನಡೆಸಿಕೊಂಡ ನಂತರ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಸೋಂಕಿದ್ದರೂ ನಾವು ಗುಣಮುಖರಾಗಿರಲು ಲಸಿಕೆ ಪಡೆದಿರುವುದೇ ಕಾರಣ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಂಸದರು ಮನವಿ ಮಾಡಿಕೊಂಡಿದ್ದಾರೆ.
ಅಮೆರಿಕಾದಲ್ಲಿ ಬಹುತೇಕ ಮಂದಿ ಲಸಿಕೆ ಪಡೆದಿದ್ದರೂ ಮತ್ತೆ ಸೋಂಕು ಕಾಣಿಸಿಕೊಳ್ಳಲು ಡೆಲ್ಟಾ ರೂಪಾಂತರಿ ಹಾವಳಿಯೇ ಕಾರಣ. ಹೀಗಾಗಿ ಮತ್ತೊಮ್ಮೆ ಎಲ್ಲರಿಗೂ ಬೂಸ್ಟರ್ ನೀಡಲು ತೀರ್ಮಾನಿಸಲಾಗಿದೆ ಎಂದು ಅಮೆರಿಕಾ ಆರೋಗ್ಯ ಇಲಾಖೆ ತಿಳಿಸಿದೆ.