ಇರಾನ್ನಲ್ಲಿ ಪುರುಷ ಪ್ರಧಾನ ನಿಯಮಗಳ ವಿರುದ್ಧ ಮಹಿಳೆಯರ ಅಸಮಾಧಾನದ ಕಟ್ಟೆ ಒಡೆದಿದೆ. ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸ್ಗಿರಿಗೆ ಸುಂದರ ಯುವತಿ ಬಲಿಯಾಗಿದ್ದು,
ಈ ದೇಶದ ಪ್ರತಿ ಮಹಿಳೆಯ ಒಡಲಲ್ಲಿ ಕಿಚ್ಚು ಹೊತ್ತಿಸಿತು. ಆಗ ಸಾವಿರಾರು ಮಹಿಳೆಯರು ಬೀದಿಗಿಳಿದು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತಿದರು. ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತು.
ಮಹಿಳೆಯರ ಆಕ್ರೋಶಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆಯೇ ಒಂದು ಕ್ಷಣ ನಡುಗಿ ಹೋಯಿತು. ಇದರ ನಡುವೆಯೇ ಮಹಿಳೆಯರ ಹೋರಾಟ ಹತ್ತಿಕ್ಕಲು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಯಿತು.
ಇತ್ತ ಹೋರಾಟ ತೀವ್ರಗೊಂಡಿದ್ದರೆ ಅತ್ತ ಅದನ್ನು ಹತ್ತಿಕ್ಕುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದವು. ಹೆಣ್ಣುಮಕ್ಕಳು ಶಿಕ್ಷಿತರಾದರೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾರೆಂಬ ಆತಂಕ ಇರಾನ್ನ ಆಡಳಿತ ವ್ಯವಸ್ಥೆಗೆ ಆತಂಕ ಮೂಡಿಸಿತು. ಹೀಗಾಗಿ ಅವರನ್ನು ಶಿಕ್ಷಣ ವಂಚಿತರನ್ನಾಗಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಘನಘೋರ ಕುಕೃತ್ಯದ ಸನ್ನಿವೇಶಕ್ಕೆ ಇರಾನ್ ಸಾಕ್ಷಿಯಾಗಿದೆ.