Select Your Language

Notifications

webdunia
webdunia
webdunia
webdunia

ಶ್ರೀಲಂಕಾದಲ್ಲಿ ಆಹಾರದ ಕೊರತೆ ಎದುರಾಗಿಲ್ಲ: ಸರ್ಕಾರದ ಸ್ಪಷ್ಟನೆ

ಶ್ರೀಲಂಕಾದಲ್ಲಿ ಆಹಾರದ ಕೊರತೆ ಎದುರಾಗಿಲ್ಲ: ಸರ್ಕಾರದ ಸ್ಪಷ್ಟನೆ
ಕೊಲಂಬೊ , ಗುರುವಾರ, 2 ಸೆಪ್ಟಂಬರ್ 2021 (12:08 IST)
ಕೊಲಂಬೊ : ದೇಶವು ಆಹಾರದ ಕೊರತೆ ಎದುರಿಸುತ್ತಿದೆ ಎಂಬ ವರದಿಗಳನ್ನು ಶ್ರೀಲಂಕಾ ಸರ್ಕಾರವು ಗುರುವಾರ ನಿರಾಕರಿಸಿದೆ. ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ನಿಷೇಧಿಸುವ ಉದ್ದೇಶದಿಂದ ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ತಿಳಿಸಿದೆ.

ಆಹಾರಧಾನ್ಯಗಳ ಶೇಖರಣೆಯನ್ನು ತಡೆಯುವ ಕ್ರಮವಾಗಿ, ಅಗತ್ಯವಸ್ತುಗಳ ಬೆಲೆ ನಿಯಂತ್ರಿಸುವ ತುರ್ತು ಆದೇಶವನ್ನು ಮೂಲಕ ರಾಷ್ಟ್ರದ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಆಗಸ್ಟ್ 31ರಂದು ಹೊರಡಿಸಿದ್ದರು.
ಅಗತ್ಯ ವಸ್ತುಗಳ ಪೂರೈಕೆಯ ಮೇಲಿನ ತುರ್ತು ಆದೇಶವನ್ನು ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯ ಮೂಲಕ ಹೊರಡಿಸಲಾಗಿದೆ ಎಂದು ಅಧ್ಯಕ್ಷರ ವಕ್ತಾರ ಕಿಂಗ್ಸ್ಲೆ ರತ್ನಾಯಕ್ ಸುದ್ದಿಗಾರರಿಗೆ ತಿಳಿಸಿದರು. 'ದೇಶದಲ್ಲಿ ಆಹಾರದ ಕೊರತೆ ಎದುರಾಗಿರುವುದಾಗಿ ಕೆಲವು ಸ್ಥಳೀಯ ಮತ್ತು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳಿಗೆ ಯಾವುದೇ ಆಧಾರವಿಲ್ಲ' ಎಂದು ಸರ್ಕಾರದ ಮಾಹಿತಿ ನಿರ್ದೇಶಕರು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ವ್ಯಾಪಾರಿಗಳು ಭತ್ತ, ಅಕ್ಕಿ ಮತ್ತು ಸಕ್ಕರೆಯಂತಹ ಆಹಾರ ಪದಾರ್ಥಗಳನ್ನು ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ತಡೆಯಲು ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯಡಿಯಲ್ಲಿ ನಿಯಮಗಳನ್ನು ಜಾರಿಗೆ ತಂದು ಆದೇಶ ಹೊರಡಿಸಲಾಗಿದೆ. ಅನಗತ್ಯ ದಾಸ್ತಾನು ವಶಪಡಿಸಿಕೊಂಡು, ಅದನ್ನು ಸರ್ಕಾರಿ ಸಂಸ್ಥೆಗಳ ಸುಪರ್ದಿಗೆ ವಹಿಸುವುದು ಈ ಆದೇಶದ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.
ಭತ್ತ, ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸರ್ಕಾರದ ಆದೇಶದ ಬೆಲೆಯಲ್ಲಿ ಮಾರಾಟ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಮಿಲಿಟರಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ಹೇಳಿದೆ.
ಕೋವಿಡ್, ಸ್ಥಳೀಯ ಕರೆನ್ಸಿ ಕುಸಿತ ಸೇರಿದಂತೆ ಹಲವು ಕಾರಣಗಳಿಂದಾಗಿ ಶ್ರೀಲಂಕಾದಲ್ಲಿ ಇತ್ತೀಚಿನ ಕೆಲ ವಾರಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ವ್ಯಾಪಾರಿಗಳು ಅಗತ್ಯವಸ್ತುಗಳನ್ನು ದಾಸ್ತಾನು ಮಾಡಿರುವುದೇ ಇದಕ್ಕೆ ಕಾರಣ ಎಂದು ಸರ್ಕಾರ ದೂಷಿಸಿದೆ.
ಪ್ರವಾಸಿಗರ ಸಂಖ್ಯೆಯಲ್ಲಿನ ಭಾರಿ ಕುಸಿತದ ಪರಿಣಾಮವಾಗಿ ಶ್ರೀಲಂಕಾದ ಆರ್ಥಿಕತೆಯು ಕಳೆದ ವರ್ಷ ದಾಖಲೆಯ ಶೇಕಡಾ 3.6 ರಷ್ಟು ಕುಗ್ಗಿದೆ. ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ದೇಶದಲ್ಲಿ ಸೋಮವಾರದವರೆಗೆ 16 ದಿನಗಳ ಕರ್ಫ್ಯೂ ಘೋಷಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗೆ ಮತ್ತೆ ಶಾಕ್; 1000 ರೂ. ಗಡಿ ದಾಟಲಿದೆ ಅಡುಗೆ ಅನಿಲ..!