ಢಾಕಾ: ಬಾಂಗ್ಲಾದೇಶದಲ್ಲಿ ನೂತನವಾಗಿ ಜಾರಿಗೆ ಬಂದಿರುವ ಮಧ್ಯಂತರ ಸರ್ಕಾರ ಆಝಾನ್ ಮತ್ತು ನಮಾಜ್ ವೇಳೆ ಹಿಂದೂ ದೇವಾಲಯಗಳಲ್ಲಿ ದುರ್ಗಾ ಪೂಜೆ, ಭಕ್ತಿಗೀತೆಗಳನ್ನು ಹಾಕುವುದನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದೆ.
ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತ ಮುಸ್ಲಿಮರ ಪ್ರಾರ್ಥನೆಗೆ ಭಂಗ ತರಬಾರದು ಎಂದು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಸರ್ಕಾರ ಈ ಆದೇಶ ಹೊರಡಿಸಿದೆ. ಇದಕ್ಕೆ ಹಿಂದೂ ಸಮುದಾಯದವರೂ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಸಲ್ಮಾನರ ಪ್ರಾರ್ಥನೆ ವೇಳೆ ಅಲ್ಲಿ ದೇವಾಲಯವೂ ಸೈಲೆಂಟ್ ಆಗಲಿದೆ.
ಆಝಾನ್, ನಮಾಜ್ ವೇಳೆ ಹಿಂದೂ ದೇವಾಲಯಗಳಲ್ಲಿ ಭಕ್ತಿ ಗೀತೆಗಳನ್ನು ಪ್ಲೇ ಮಾಡುವುದನ್ನು ನಿಲ್ಲಿಸಬೇಕು ಎಂಬ ಆದೇಶವನ್ನು ಹಿಂದೂ ಸಮುದಾಯದವರೂ ಒಪ್ಪಿಕೊಂಡಿದ್ದಾರೆ ಎಂದು ಗೃಹಸಚಿವಾಲಯದ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಜಹಾಂಗೀರ್ ಅಲಾಮ್ ಹೇಳಿದ್ದಾರೆ.
ಆಝಾನ್ ಗೆ ಐದು ನಿಮಿಷ ಮೊದಲೇ ದೇವಾಲಯದಲ್ಲಿ ಪ್ಲೇ ಆಗುವ ಹಾಡುಗಳು ಬಂದ್ ಆಗಬೇಕು ಎಂದಿದ್ದಾರೆ. ಇನ್ನೇನು ದುರ್ಗಾ ಪೂಜೆ ಬರಲಿದ್ದು, ಇದಕ್ಕೆ ಮೊದಲು ಹಿಂದೂ ಸಮುದಾಯದವರೊಂದಿಗೆ ಸಭೆ ನಡೆಸಿದ ಬಳಿಕ ಈ ಆದೇಶ ನೀಡಲಾಗಿದೆ. ದುರ್ಗಾ ಪೂಜೆಗೆ ಸರ್ಕಾರವೂ ಅನುವು ಮಾಡಿಕೊಡಲಿದೆ. ಆದರೆ ಈ ನಿಯಮವನ್ನು ಪಾಲಿಸಲೇಬೇಕು ಎಂದು ಜಹಾಂಗೀರ್ ಅಲಾಮ್ ಹೇಳಿದ್ದಾರೆ.